ಬೆಂಗಳೂರು, ಸೆ.30 (DaijiworldNews/PY): ಬಿಜೆಪಿ ಹಾಗೂ ಆರ್ಎಸ್ಎಸ್ ಸಂಘಟನೆಗಳನ್ನು ತಾಲಿಬಾನ್ಗೆ ಹೋಲಿಸಿ ವಿಪಕ್ಷ ನಾಯಕ ಸಿದ್ದರಾಮಯ್ಯ ನೀಡಿರುವ ಹೇಳಿಕೆಗೆ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಹೇಳಿಕೆಯನ್ನು ಉಲ್ಲೇಖಿಸಿ ಬಿಜೆಪಿ ತಿರುಗೇಟು ನೀಡಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ರಾಜ್ಯ ಬಿಜೆಪಿ, "ಸಿದ್ದರಾಮಯ್ಯ ಅವರ ತಾಲಿಬಾನ್ ಹೇಳಿಕೆಯನ್ನು ಕಾಂಗ್ರೆಸ್ ಒಪ್ಪುತ್ತದೆಯೇ? ಕೆಪಿಸಿಸಿ ಅಧ್ಯಕ್ಷರಾಗಿ ಡಿ ಕೆ ಶಿವಕುಮಾರ್ ಈ ಹೇಳಿಕೆಯನ್ನು ದೃಢೀಕರಿಸುತ್ತಾರೆಯೇ? ಕೆಪಿಸಿಸಿ ಅಧ್ಯಕ್ಷರೇ, ಹಿಂದೂಗಳ ಭಾವನೆ ಕೆಣಕುವ ಸಿದ್ದರಾಮಯ್ಯ ಅವರ ಚಾಳಿಗೆ ನೀವೂ ಕೈ ಜೋಡಿಸುತ್ತೀರಾ?" ಎಂದು ಪ್ರಶ್ನಿಸಿದೆ.
"ನಾನು ಆರ್ಎಸ್ಎಸ್ ಶಾಖೆಯ ಸದಸ್ಯನಾಗಿದ್ದೆ. ನಮಸ್ತೇ ಸದಾ ವತ್ಸಲೆ ಗೀತೆಯನ್ನೂ ಹಾಡಿದ್ದೆ" ಮಾನ್ಯ ಡಿ ಕೆ ಶಿವಕುಮಾರ್, ಇದು ನಿಮ್ಮದೇ ಹೇಳಿಕೆ. ಈಗ ಸಿದ್ದರಾಮಯ್ಯ ಹಾಗೂ ಅವರ ಪಟಾಲಂಗಳ ಬಾಯಿಯಿಂದ ಹೊರಡುತ್ತಿರುವ ಮಾತುಗಳನ್ನು ನೀವು ಒಪ್ಪಿಕೊಳ್ಳುವಿರಾ? ಡಿಕೆಶಿ ಅವರೇ, ನಿಮ್ಮನ್ನು ಅಡಕತ್ತರಿಯಲ್ಲಿ ಸಿಲುಕಿಸುವ ಹುನ್ನಾರವಿದು ಎಂದಿದೆ.
"ಭಾರತೀಯ ಹಿಂದೂ ಪರಿಷತ್ (ಬಿಎಚ್ಪಿ) ಸ್ಥಾಪಿಸಿತ್ತು ಕಾಂಗ್ರೆಸ್. ಕೇಡರ್ ಮಾದರಿಯಲ್ಲಿ ಪಕ್ಷ ಸಂಘಟಿಸುತ್ತೇವೆ ಎಂದಿತ್ತು ಕಾಂಗ್ರೆಸ್. ಪ್ರೇರಕ್ ಸೃಷ್ಟಿಸುತ್ತೇವೆ ಎಂದಿತ್ತು ಕಾಂಗ್ರೆಸ್. ಸಂದರ್ಭಾನುಸಾರವಾಗಿ ಪ್ರಶಂಸೆ ವ್ಯಕ್ತಪಡಿಸಿದ್ದ ಕಾಂಗ್ರೆಸ್, ಸಿದ್ದರಾಮಯ್ಯ ಹೇಳಿಕೆಯನ್ನು ಸಮರ್ಥಿಸಿಕೊಳ್ಳುವುದೇ?" ಎಂದು ಕೇಳಿದೆ.
"ಕಾಂಗ್ರೆಸ್ ಪಕ್ಷದ ಬೌದ್ಧಿಕ ಸಾಮರ್ಥ್ಯ ವಿಸ್ತಾರಗೊಳಿಸಿದ ಮಾಜಿ ರಾಷ್ಟ್ರಪತಿ ದಿ. ಪ್ರಣಬ್ ಮುಖರ್ಜಿ ಅವರು ಸಂಘಕಾರ್ಯಕ್ರಮಕ್ಕೆ ಭೇಟಿ ನೀಡಿ ಸೇವಾ ಕಾರ್ಯವನ್ನು ಶ್ಲಾಘಿಸಿದ್ದರು. ಹಾಗಾದರೆ, ವಲಸೆ ಬಂದಿರುವ ಸಿದ್ದರಾಮಯ್ಯ ಅವರಿಗೆ ನೈಜ ಕಾಂಗ್ರೆಸ್ಸಿಗರ ಬಗ್ಗೆ ಗೌರವವಿಲ್ಲ ಎಂದಾಯ್ತಲ್ಲವೇ?" ಎಂದು ಪ್ರಶ್ನಿಸಿದೆ.