ನವದೆಹಲಿ, ಸೆ 30 (DaijiworldNews/MS): ಕೋವಿಡ್ -19 ರ ಮೂರನೇ ಅಲೆಯ ಆತಂಕದ ನಡುವೆ, ಅಖಿಲ ಭಾರತ ಆಯುರ್ವೇದ ಸಂಸ್ಥೆ (ಎಐಐಎ) 16 ವರ್ಷದೊಳಗಿನ ಮಕ್ಕಳಿಗೆ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲಿರುವ 'ಬಾಲ ರಕ್ಷಾ ಕಿಟ್' ಅನ್ನು ಅಭಿವೃದ್ದಿಪಡಿಸಿದೆ. ಅಂದಹಾಗೆ ಆಯುಷ್ ಸಚಿವಾಲಯದ ಅಡಿಯಲ್ಲಿ ಅಖಿಲ ಭಾರತ ಆಯುರ್ವೇದ ಸಂಸ್ಥೆಕಾರ್ಯ ನಿರ್ವಹಿಸುತ್ತದೆ.
SARS-CoV-2 (COVID-19) ಸೋಂಕಿನ ವಿರುದ್ಧ ಹೋರಾಡಲು ಮತ್ತು ಅವರನ್ನು ಆರೋಗ್ಯವಾಗಿಡಲು ಸಹಾಯ ಮಾಡಲು ಮಕ್ಕಳ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಕಿಟ್ ಸಹಾಯ ಮಾಡುತ್ತದೆ ಎಂದು ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.
'ಬಾಲ ರಕ್ಷಾ ಕಿಟ್ ನಲ್ಲಿ ತುಳಸಿ, ಅಮೃತಬಳ್ಳಿ, ದಾಲ್ಚಿನ್ನಿ ಮತ್ತು ಒಣ ದ್ರಾಕ್ಷಿಯಿಂದ ಕೂಡಿದ ಸಿರಪ್ ಅನ್ನು ಒಳಗೊಂಡಿದೆ, ಇದು ಅದ್ಭುತವಾದ ಔಷಧೀಯ ಗುಣಗಳನ್ನು ಹೊಂದಿದೆ. ಇದರ ಜೊತೆಗೆ ಅನು ತೈಲ, ಸೀತೋಪಲಾಡಿ ಮತ್ತು ಚ್ಯವನಪ್ರಾಶ್ ಒಳಗೊಂಡಿದೆ. ಇದರ ನಿಯಮಿತ ಸೇವನೆಯಿಂದ ಮಕ್ಕಳಲ್ಲಿ ನಿರೋಧಕ ಶಕ್ತಿ ಹೆಚ್ಚಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಚಿವಾಲಯದ ಅಧಿಕಾರಿಗಳ ಪ್ರಕಾರ, ಉಲ್ಲೇಖಿತ ಕಿಟ್ ಮಕ್ಕಳಲ್ಲಿ ಕೋವಿಡ್ ಸೋಂಕು ನಿರೋಧಕ ಶಕ್ತಿಯನ್ನು ಹೆಚ್ಚಿಸಿದ್ದು, ಆರೋಗ್ಯಕರವಾಗಿ ಇರಲೂ ಸಹಾಯಕವಾಗಲಿದೆ. ತುಳಸಿ, ಒಣದ್ರಾಕ್ಷಿ, ಅಮೃತಬಳ್ಳಿ, ದಾಲ್ಚಿನ್ನಿ, ಬೇರಿನ ರಸ ಬಳಸಿ ತಯಾರಿಸಲಾದ ಸಿರಪ್, ಚ್ಯವನಪ್ರಾಶ, ತೈಲವನ್ನೂ ಒಳಗೊಂಡಿದೆ. ಇದರ ನಿಯಮಿತ ಸೇವನೆಯಿಂದ ಮಕ್ಕಳಲ್ಲಿ ನಿರೋಧಕ ಶಕ್ತಿ ಹೆಚ್ಚಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಚಿವಾಲಯದ ಕಟ್ಟುನಿಟ್ಟಿನ ಮೇಲ್ವಿಚಾರಣೆಯಲ್ಲಿ ಕಿಟ್ ರೂಪಿಸಲಾಗಿದೆ. ಸರ್ಕಾರದ ಅಂಗ ಸಂಸ್ಥೆ ಭಾರತೀಯ ವೈದ್ಯಕೀಯ ಔಷದ ಕಂಪನಿ (ಐಎಂಪಿಸಿಎಲ್), ಉತ್ತರಾಖಂಡ್ನಲ್ಲಿ ಇರುವ ತನ್ನ ಘಟಕದಲ್ಲಿ ತಯಾರಿಸಿದೆ ಎಂದು ತಿಳಿಸಿದ್ದಾರೆ. ರಾಷ್ಟ್ರೀಯ ಆಯುರ್ವೇದ ದಿನವಾದ ನ. 2ರಂದು ಸುಮಾರು 10 ಸಾವಿರ ಕಿಟ್ಗಳನ್ನು ಉಚಿತವಾಗಿ ಎಐಐಎ ವಿತರಿಸಲಿದೆ. ಮಕ್ಕಳಿಗಾಗಿ ಸದ್ಯ ಕೋವಿಡ್ ಲಸಿಕೆ ಲಭ್ಯವಿಲ್ಲದೇ ಇರುವುದರಿಂದ ಬಾಲ ಸುರಕ್ಷಾ ಕಿಟ್ ಮಕ್ಕಳ ಆರೋಗ್ಯದ ದೃಷ್ಟಿಯಿಂದ ಅತ್ಯುತ್ತಮ ಅಭಿವೃದ್ಧಿಯಾಗಿದೆ ಎಂದು ಅಧಿಕಾರಿಗಳು ಪ್ರತಿಪಾದಿಸಿದ್ದಾರೆ.