ಬೆಂಗಳೂರು, ಸೆ.30 (DaijiworldNews/PY): ಸಿಎಂ ಬಸವರಾಜ ಬೊಮ್ಮಾಯಿ ಅವರು ಮತ್ತೆ ದೆಹಲಿಗೆ ತೆರಳಲಿದ್ದು, ಅ.8ರಂದು ದೆಹಲಿಗೆ ಪ್ರಯಾಣ ಬೆಳೆಸಲಿದ್ದಾರೆ.
ಎರಡು ದಿನಗಳ ಕಾಲ ದೆಹಲಿಯಲ್ಲಿ ಬಿಜೆಪಿ ನಾಯಕರು ಸೇರಿದಂತೆ ಕೇಂದ್ರ ಸಚಿವರನ್ನು ಸಿಎಂ ಬಸವರಾಜ ಬೊಮ್ಮಾಯಿ ಅವರು ಭೇಟಿಯಾಗಲಿದ್ದಾರೆ.
ಬಸವರಾಜ ಬೊಮ್ಮಾಯಿ ಅವರು ಸಿಎಂ ಆದ ಬಳಿಕ ನಾಲ್ಕನೇ ಬಾರಿಗೆ ದೆಹಲಿಗೆ ಪ್ರವಾಸ ಮಾಡುತ್ತಿದ್ದಾರೆ. ಈ ಬಾರಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ ಹಾಗೂ ಬಿಜೆಪಿ ಕರ್ನಾಟಕ ಉಸ್ತುವಾರಿ ಅರುಣ್ ಸಿಂಗ್ ಅವರನ್ನು ಭೇಟಿಯಾಗಲಿದ್ದಾರೆ.
ಸಿಎಂ ಬಸವರಾಜ ಬೊಮ್ಮಾಯಿ ಅವರು ಈಗಾಗಲೇ ಜೆ ಪಿ ನಡ್ಡಾ ಭೇಟಿಗೆ ಸಮಯ ಕೇಳಿದ್ದಾರೆ. ದೆಹಲಿ ಪ್ರವಾಸದ ವೇಳೆ ಸಿಎಂ ಬಸವರಾಜ ಬೊಮ್ಮಾಯಿ ಅವರು ವಿವಿಧ ಕೇಂದ್ರ ಸಚಿವರನ್ನೂ ಕೂಡಾ ಭೇಟಿಯಾಗಲಿದ್ದಾರೆ.
ರಾಜ್ಯದ ಹಾನಗಲ್ ಹಾಗೂ ಸಿಂದಗಿ ವಿಧಾನಸಭೆ ಕ್ಷೇತ್ರಗಳಿಗೆ ಉಪ ಚುನಾವಣೆ ಘೋಷಣೆಯಾಗಿದೆ. ಎರಡೂ ಕಡೆ ಅ.30ರಂದು ಉಪ ಚುನಾವಣೆ ನಡೆಯಲಿದ್ದು, ಈ ನಡುವೆ ಸಿಎಂ ಬಸವರಾಜ ಬೊಮ್ಮಾಯಿ ಅವರ ದೆಹಲಿ ಭೇಟಿ ಮಹತ್ವ ಪಡೆದುಕೊಂಡಿದೆ.