ಬೆಂಗಳೂರು, ಸೆ.30 (DaijiworldNews/PY): ಕಾಂಗ್ರೆಸ್ ಪಕ್ಷ ಇಲ್ಲದಿದ್ದಲ್ಲಿ ನಾನು ಮಾತ್ರವೇ ಅಲ್ಲ, ದೇಶವೂ ಉಳಿಯಲು ಸಾಧ್ಯವಿಲ್ಲ ಎಂದ ಕನ್ನಯ್ಯ ಕುಮಾರ್ ಹೇಳಿಕೆಗೆ ಸಾಮಾಜಿಕ ಹೋರಾಟಗಾರ, ನಟ ಚೇತನ್ ಕುಮಾರ್ ಅಹಿಂಸಾ ಪ್ರತಿಕ್ರಿಯೆ ನೀಡಿದ್ದು, "ಇದು ಅಸತ್ಯ ಹಾಗೂ ಭಟ್ಟಂಗಿತನ" ಎಂದು ಹೇಳಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, "ಹೊಸದಾಗಿ ಕಾಂಗ್ರೆಸ್ಗೆ ಸೇರ್ಪಡೆಯಾದ ಕನ್ಹಯ್ಯ ಕುಮಾರ್ ಅವರು ಕಾಂಗ್ರೆಸ್ ಇಲ್ಲದೇ ದೇಶ ಉಳಿಯಲು ಸಾಧ್ಯವಿಲ್ಲ ಎಂಬ ಹೇಳಿಕೆ ನೀಡಿದ್ದಾರೆ. ಇದು ಅಸತ್ಯ ಹಾಗೂ ಭಟ್ಟಂಗಿತನ" ಎಂದಿದ್ದಾರೆ.
"ಕಾಂಗ್ರೆಸ್ (ಹಾಗೂ ಬಿಜೆಪಿಯ) ಅವಕಾಶವಾದ ಹಾಗೂ ಬೂಟಾಟಿಕೆಗಳಿಲ್ಲದೆಯೇ ಕರ್ನಾಟಕ ಹಾಗೂ ಭಾರತವು ಉತ್ತಮವಾಗಿರುತ್ತದೆ" ಎಂದು ತಿಳಿಸಿದ್ದಾರೆ.
"ವೈಯುಕ್ತಿಕ ಅಧಿಕಾರದ ಸಲುವಾಗಿ, ಕನ್ಹಯ್ಯ ಅವರು ವಿಶ್ವಾಸಾರ್ಹತೆಯನ್ನು ಕಳೆದುಕೊಂಡಿದ್ದಾರೆ" ಎಂದು ಹೇಳಿದ್ದಾರೆ.
"ಕಾಂಗ್ರೆಸ್ ಪಕ್ಷ ಒಂದು ದೊಡ್ಡ ಹಡಗಿದ್ದಂತೆ. ಅದು ಉಳಿದರೆ ಅನೇಕ ಜನರ ಆಕಾಂಕ್ಷೆ, ಮಹಾತ್ಮ ಗಾಂಧಿಯವರ ಏಕತೆ, ಭಗತ್ ಸಿಂಗ್ ಅವರ ಧೈರ್ಯ ಹಾಗೂ ಬಿ ಆರ್ ಅಂಬೇಡ್ಕರ್ ಅವರ ಸಮಾನತೆಯ ನೀತಿಗಳು ರಕ್ಷಣೆಯಾಗುತ್ತವೆ" ಎಂದಿದ್ದರು.
"ಕಾಂಗ್ರೆಸ್ ಪಕ್ಷಕ್ಕೆ ನಾನು ಸೇರ್ಪಡೆಯಾಗುತ್ತಿದ್ದೇನೆ. ಏಕೆಂದರೆ, ಇದು ಕೇವಲ ಪಕ್ಷವಲ್ಲ ಇಂದು ಒಂದು ಕಲ್ಪನೆ. ಕಾಂಗ್ರೆಸ್ ದೇಶ ಕಂಡ ಹಳೆಯ ಹಾಗೂ ಅತ್ಯಂತ ಪ್ರಜಾಸತ್ತಾತ್ಮಕ ಪಕ್ಷ. ನಾನು ಪ್ರಜಾಪ್ರಭುತ್ವಕ್ಕೆ ಒತ್ತು ನೀಡುತ್ತೇನೆ. ಕಾಂಗ್ರೆಸ್ ಪಕ್ಷ ಇಲ್ಲದೇ ಇದ್ದಲ್ಲಿ ನಾನು ಮಾತ್ರವೇ ಅಲ್ಲ, ದೇಶವೂ ಉಳಿಯಲು ಸಾಧ್ಯವಿಲ್ಲ" ಎಂದು ಹೇಳಿದ್ದರು.
ಮಂಗಳವಾರ ಯುವ ನಾಯಕ ಕನ್ಹಯ್ಯ ಕುಮಾರ್ ಅವರು ಕಾಂಗ್ರೆಸ್ಗೆ ಸೇರ್ಪಡೆಗೊಂಡಿದ್ದಾರೆ. ಗುಜರಾತ್ನ ಪಕ್ಷೇತರ ಜಿಗ್ನೇಶ್ ಮೆವಾನಿ ಜೊತೆಗೆ ಕಾಂಗ್ರೆಸ್ ಕೇಂದ್ರ ಕಚೇರಿಗೆ ಭೇಟಿ ನೀಡಿದ್ದ ಅವರು ಕಾಂಗ್ರೆಸ್ಗೆ ಸೇರ್ಪಡೆಗೊಂಡರು.