ಬೆಳಗಾವಿ, ಸೆ.30 (DaijiworldNews/PY): ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ರಸ್ತೆ ಗುಂಡಿ ವಿವಾದ ರಾಜಕೀಯ ವಿಚಾರಕ್ಕೆ ಸಂಬಂಧಪಟ್ಟಂತೆ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ದ ವಾಗ್ದಾಳಿ ನಡೆಸುವ ಭರದಲ್ಲಿ ಬಿಜೆಪಿ ಮಾಜಿ ಶಾಸಕ ಸಂಜಯ ಪಾಟೀಲ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಈ ಬಗ್ಗೆ ಹೇಳಿಕೆ ನೀಡಿರುವ ಅವರು, "ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ನೈಟ್ ಪಾಲಿಟಿಕ್ಸ್ ಚೆನ್ನಾಗಿ ತಿಳಿದಿದೆ" ಎಂದಿದ್ದಾರೆ.
"ಬಿಜೆಪಿಯವರಿಗೆ ನೈಟ್ ಪಾಲಿಟಿಕ್ಸ್ ಮಾಡಿ ಗೊತ್ತಿಲ್ಲ. ಕಾಂಗ್ರೆಸ್ಸಿಗರು ನೈಟ್ ಪಾಲಿಟಿಕ್ಸ್ ಮಾಡುತ್ತಾರೆ. ಲಕ್ಷ್ಮೀ ಹೆಬ್ಬಾಳ್ಕರ್ ನೈಟ್ ಪಾಲಿಟಿಕ್ಸ್ ಚೆನ್ನಾಗಿ ಗೊತ್ತು. ಹಾಗಾಗಿ ಅವರು ನೈಟ್ ಪಾಲಿಟಿಕ್ಸ್ ಮಾಡಿ ಶಾಸಕಿಯಾಗಿದ್ದಾರೆ" ಎಂದು ಹೇಳಿದ್ದಾರೆ.
"ಲಕ್ಷ್ಮೀ ಹೆಬ್ಬಾಳ್ಕರ್ ಅವರು ಜನರಿಗೆ ಸುಳ್ಳು ಭರವಸೆ ನೀಡಿ ಗೆದ್ದು ಬಂದಿದ್ದಾರೆ. ಇದೀಗ ಭಾವನಾತ್ಮಕ ಪಾಲಿಟಿಕ್ಸ್ ಮಾಡುತ್ತಿದ್ದಾರೆ" ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
"ಲಕ್ಷ್ಮೀ ಹೆಬ್ಬಾಳ್ಕರ್ಗೆ ಸತ್ಯ ಎದುರಿಸುವ ಶಕ್ತಿ ಬರುತ್ತಿಲ್ಲ. ಶಾಸಕಿ ಆಗುವ ಮುನ್ನ ನಾನು ನಿಮ್ಮ ಮಗಳು ಎಂದಿದ್ದರು. ಆದರೆ, ಗೆದ್ದು ಬಂದ ಬಳಿಕ ಯಾವುದೇ ಅಭಿವೃದ್ದಿ ಕೆಲಸ ಮಾಡಲಿಲ್ಲ. ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಜನರೇ ಪ್ರತಿಕ್ರಿಯೆಗಳನ್ನು ನೀಡುತ್ತಾರೆ" ಎಂದು ಕಿಡಿಕಾರಿದ್ದಾರೆ.