ಕೋಲ್ಕತ್ತ, ಸೆ.30 (DaijiworldNews/PY): ಪಶ್ಚಿಮ ಬಂಗಾಳದ ಭವಾನಿಪುರ ವಿಧಾನಸಭೆಗೆ ಇಂದು ಮತದಾನ ಪ್ರಕ್ರಿಯೆ ಪ್ರಾರಂಭಗೊಂಡಿದೆ.
ಈ ಸಂದರ್ಭ ಟಿಎಂಸಿ ಶಾಸಕ ಮದನ್ ಮಿತ್ರ ಅವರು ಮತಗಟ್ಟೆಯೊಂದನ್ನು ವಶಪಡಿಸಿಕೊಳ್ಳಲು ಯತ್ನಿಸುತ್ತಿದ್ದಾರೆ ಎಂದು ಬಿಜೆಪಿ ಅಭ್ಯರ್ಥಿ ಪ್ರಿಯಾಂಕಾ ಟಿಬ್ರೆವಾಲ್ ದೂರಿದ್ದಾರೆ.
"ಟಿಎಂಸಿ ಶಾಸಕ ಮದನ್ ಮಿಶ್ರ ಅವರು ಮತಗಟ್ಟೆಯನ್ನು ವಶಪಡಿಸಿಕೊಳ್ಳಲು ಯತ್ನಿಸುತ್ತಿದ್ದಾರೆ. ಹಾಗಾಗಿ ಉದ್ದೇಶಪೂರ್ವಕವಾಗಿ ಮತಯಂತ್ರವನ್ನು ಸ್ಥಗಿತಗೊಳಿಸಲಾಗಿದೆ" ಎಂದು ಸುದ್ದಿಸಂಸ್ಥೆಯೊಂದಕ್ಕೆ ಪ್ರಿಯಾಂಕಾ ಟಿಬ್ರೆವಾಲ್ ತಿಳಿಸಿದ್ದಾರೆ.
ಮಮತಾ ಬ್ಯಾನರ್ಜಿ ಅವರು ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯಲ್ಲಿ ನಂದಿಗ್ರಾಮದಿಂದ ಸ್ಪರ್ಧಿಸಿದ್ದು ಸುವೇಂದು ಅಧಿಕಾರಿ ಅವರ ವಿರುದ್ದ ಅಲ್ಪ ಮತಗಳ ಅಂತರದಲ್ಲಿ ಸೋಲುಕಂಡಿದ್ದರು.ಈ ಹಿನ್ನೆಲೆ ಉಪ ಚುನಾವಣೆಯಲ್ಲಿ ಮಮತಾ ಬ್ಯಾನರ್ಜಿ ಕಣಕ್ಕಿಳಿದಿದ್ದಾರೆ.
2011 ಹಾಗೂ 2016ರ ವಿಧಾನಸಭೆ ಚುನಾವಣೆಗಳಲ್ಲಿ ಭವಾನಿಪುರ ಕ್ಷೇತ್ರದಿಂದ ಸ್ಪರ್ಧಿಸಿದ್ದ ಮಮತಾ ಗೆಲುವು ಸಾಧಿಸಿದ್ದರು. ಸೆ.30ರಂದು ನಡೆಯುತ್ತಿರುವ ಚುನಾವಣೆಯಲ್ಲಿ ಮಮತಾ ಬ್ಯಾನರ್ಜಿ ಅವರ ವಿರುದ್ದ ಅಭ್ಯರ್ಥಿಯನ್ನು ಹಾಕದೇ ಇರಲು ಕಾಂಗ್ರೆಸ್ ತೀರ್ಮಾನಿಸಿದೆ. ಫಲಿತಾಂಶ ಅ.3ರಂದು ಪ್ರಕಟವಾಗಲಿದೆ.