ಬೆಂಗಳೂರು, ಸೆ.30 (DaijiworldNews/PY): ಬಿಜೆಪಿ ಹಾಗೂ ಆರ್ಎಸ್ಎಸ್ ಸಂಘಟನೆಗಳನ್ನು ತಾಲಿಬಾನ್ಗೆ ಹೋಲಿಸಿ ಹೇಳಿಕೆ ನೀಡಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ದ ಬಿಜೆಪಿ ನಾಯಕರು ವಾಗ್ದಾಳಿ ನಡೆಸುತ್ತಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಮಾಜಿ ಶಿಕ್ಷಣ ಸಚಿವ ಸುರೇಶ್ ಕುಮಾರ್, ಕರ್ನಾಟಕ ರಾಜ್ಯದಲ್ಲಿ "ತಾಲಿಬಾನಿ" ಎಂಬ ಪದ ರಾಜಕೀಯವಾಗಿ ತೀವ್ರ ಬಳಕೆಯಾಗುತ್ತಿರುವುದನ್ನು ಕಂಡು ಆಫ್ಘಾನಿಸ್ತಾನದ ಮೂಲ ತಾಲಿಬಾನಿಗರಿಗೆ ತೀವ್ರ ಅಸಮಾಧಾನವಾದರೆ ಆಶ್ಚರ್ಯವಿಲ್ಲ! ಎಂದು ಲೇವಡಿ ಮಾಡಿದ್ದಾರೆ.
"ಸನ್ಮಾನ್ಯ ಸಿಎಂ ಬಸವರಾಜ ಬೊಮ್ಮಾಯಿ ಅವರೇ ಮಂಗಳೂರಿನಲ್ಲಿ ಇರುವುದು ಬಿಜೆಪಿ ಸರ್ಕಾರನಾ? ತಾಲಿಬಾನ್ಗಳದ್ದಾ?" ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದರು.
"ನಾನು ಮತ್ತು ನನ್ನಂತಹ ಕೋಟ್ಯಂತರ ಜನ ನಿರ್ಭೀತಿ ಮತ್ತು ಆತ್ಮಗೌರವದಿಂದ ಬದುಕುತ್ತಿರುವುದು ಅಂಬೇಡ್ಕರ್ ಅವರು ಕೊಟ್ಟ ಸಂವಿಧಾನದಿಂದ. ನಿಮ್ಮ ಪರಿವಾರದ ತಾಲಿಬಾನ್ ಗಿರಿಯನ್ನು ಅದೇ ಸಂವಿಧಾನದಿಂದ ಹಿಮ್ಮೆಟ್ಟಿಸುತ್ತೇವೆ" ಎಂದಿದ್ದರು.
ಟ್ವೀಟ್ನಲ್ಲಿ ಕರ್ನಾಟಕ ರಾಜ್ಯವೆಂದು ಉಲ್ಲೇಖಿಸಿರುವ ಸುರೇಶ್ ಕುಮಾರ್ ಅವರ ನಡೆ ಮಾತ್ರ ಕುತೂಹಲಕ್ಕೆ ಕಾರಣವಾಗಿದ್ದು, ರಾಜ್ಯದ ಎರಡೂ ಪಕ್ಷಗಳ ಮುಖಂಡರ ಬಗ್ಗೆ ಈ ಟ್ವೀಟ್ ಮಾಡಿದ್ದಾರೆಯೇ ಎನ್ನುವ ಪ್ರಶ್ನೆ ಮೂಡಿದೆ.