ಬೆಂಗಳೂರು, ಸೆ 29 (DaijiworldNews/MS): ಉಡುಪಿಯ ಶ್ರೀ ಶೀರೂರು ಮಠದ ಪೀಠಾಧಿಪತಿ ಸ್ಥಾನಕ್ಕೆ ಅಪ್ರಾಪ್ತ ವಯಸ್ಸಿನವರನ್ನು ನೇಮಕ ಮಾಡಿದ ಕ್ರಮ ಪ್ರಶ್ನಿಸಿ ಶಿರೂರು ಮಠ ಭಕ್ತ ಸಮಿತಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ವಜಾಗೊಳಿಸಿದೆ. ಕೋರ್ಟ್ ಆದೇಶ ಬಂದ ಹಿನ್ನೆಲೆಯಲ್ಲಿ ಶೀರೂರು ಮತ್ತು ಸೋದೆ ಮಠದ ಭಕ್ತರು ರಥಬೀದಿಯಲ್ಲಿ ಪಟಾಕಿ ಸಿಡಿಸಿ ಸಿಹಿ ಹಂಚಿದ್ದಾರೆ.
ಉಡುಪಿ ಅಷ್ಠಮಠಗಳಲ್ಲಿ ಒಂದಾದ ಶಿರೂರು ಮಠದ ಹಿಂದಿನ ಶ್ರೀಗಳಾದ ಶ್ರೀ ಲಕ್ಷ್ಮೀವರ ತೀರ್ಥರು 2018ರ ಜುಲೈ 31ರಂದು ನಿಧನದ ಬಳಿಕ ಅವರ ಉತ್ತರಾಧಿಕಾರಿಯನ್ನಾಗಿ 16 ವರ್ಷದ ಅನಿರುದ್ಧ ಸರಳತ್ತಾಯ ಅವರನ್ನು "ವೇದವರ್ಧನ ತೀರ್ಥ" ಎಂಬ ಹೆಸರಿನೊಂದಿಗೆ ಆಯ್ಕೆ ಮಾಡಲಾಗಿತ್ತು. ಶೀರೂರು ಮಠದ ದ್ವಂದ್ವ ಮಠವಾದ ಸೋದೆ ಮಠದ ವಾದಿರಾಜ ಮಠದ ಶ್ರೀ ವಿಶ್ವವಲ್ಲಭ ತೀರ್ಥ ಸ್ವಾಮೀಜಿ ನೂತನ ಪೀಠಾಧಿಪತಿ ಈ ನೇಮಕ ಮಾಡಿದ್ದರು.
ಅಪ್ರಾಪ್ತ ವಯಸ್ಸಿನವರನ್ನು ನೇಮಿಸಿರುವುದು ಸಂವಿಧಾನ ವಿರೋಧಿ ಚಟುಚಟಿಕೆ ಎಂದು ಲತವ್ಯ ಆಚಾರ್ಯ ಹಾಗೂ ಇತರರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿ ್ಕಾಯ್ದಿರಿಸಿದ್ದ ತೀರ್ಪನ್ನು ಹಂಗಾಮಿ ಮುಖ್ಯ ನ್ಯಾಯಮೂರ್ತಿ ಸತೀಶ ಚಂದ್ರ ಶರ್ಮಾ ಬುಧವಾರ ಪ್ರಕಟಿಸಿದೆ.
ಧಾರ್ಮಿಕ ಚಟುವಟಿಕೆಗಳ ದೃಷ್ಟಿಯಿಂದ ಶಿರೂರು ಮಠಕ್ಕೆ ಪೀಠಾಧಿಪತಿಯನ್ನು ನೇಮಕ ಮಾಡುವ ಅಧಿಕಾರ ಸೋದೆ ವಾದಿರಾಜ ಮಠಕ್ಕೆ ಇದೆ. ಪೀಠಾಧಿಪತಿಗಳ ನೇಮಕ ವಿಚಾರದಲ್ಲಿ 800 ವರ್ಷಗಳಿಂದ ನಡೆದುಕೊಂಡು ಬರುತ್ತಿರುವ ಮಠದ ಸಂಪ್ರದಾಯದಲ್ಲಿ ನ್ಯಾಯಾಲಯ ಮಧ್ಯ ಪ್ರವೇಶಿಸುವುದಿಲ್ಲ ಎಂದು ಹೇಳಿದ ಹೈಕೋರ್ಟ್ ಅರ್ಜಿಯನ್ನು ವಜಾಗೊಳಿಸಿ ಆದೇಶಿಸಿದೆ.