ಬೆಂಗಳೂರು, ಸೆ.29 (DaijiworldNews/PY): "ದಸರಾ ರಜೆಯ ನಂತರ 1-5ನೇ ತರಗತಿ ಆರಂಭದ ಬಗ್ಗೆ ಕೊರೊನಾ ತಾಂತ್ರಿಕಾ ಸಲಹಾ ಸಮಿತಿ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗುವುದು" ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ತಿಳಿಸಿದ್ದಾರೆ.
ಈ ಬಗ್ಗೆ ಮಾತನಾಡಿದ ಅವರು, "ನವೆಂಬರ್ನಿಂದ 1, 2ನೇ ತರಗತಿ ಆರಂಭದ ಬಗ್ಗೆ ತಯಾರಿ ನಡೆಸಲಾಗುತ್ತಿದೆ. ಇದೇ ವರ್ಷ ಹಂತ ಹಂತವಾಗಿ ಶಾಲೆಗಳನ್ನು ಆರಂಭಿಸಲಾಗುತ್ತದೆ. ದಸರಾ ರಜೆಯ ನಂತರ 3, 4 ಹಾಗೂ 5ನೇ ತರಗತಿ ಪ್ರಾರಂಭ ಮಾಡುವ ಬಗ್ಗೆ ಚಿಂತನೆ ಇದೆ. ಈ ವಿಚಾರವಾಗಿ ಕೊರೊನಾ ತಾಂತ್ರಿಕಾ ಸಲಹಾ ಸಮಿತಿ ಅನುಮತಿ ನೀಡಬೇಕಿದೆ" ಎಂದಿದ್ದಾರೆ.
ಕೊರೊನಾ ಆತಂಕದ ನಡುವೆ ಈಗಾಗಲೇ 6-12ನೇ ತರಗತಿಗಳನ್ನು ಪ್ರಾರಂಭಿಸಲಾಗಿದೆ. ಅ.1ರಿಂದ ಶೇ.50ರಷ್ಟಿದ್ದ ತರಗತಿ ಶೇ.100ರಷ್ಟು ಹೆಚ್ಚಾಗಲಿದೆ. ಈ ಮಧ್ಯೆ 1-5ನೇ ತರಗತಿ ಆರಂಭವಾಗಲಿದೆ ಎನ್ನುವ ಪೋಷಕರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, "ಈ ವಿಚಾರವಾಗಿ ಈ ವಾರ ಸಭೆಯಲ್ಲಿ ಚರ್ಚಿಸಲಾಗುವುದು" ಎಂದು ತಿಳಿಸಿದ್ದಾರೆ.
"ಸಿಎಂ ಹಾಗೂ ಕೊರೊನಾ ಉಸ್ತುವಾರಿ, ತಜ್ಞರೊಂದಿಗೆ ಈ ವಾರ ಸಭೆ ನಡೆಸಲಾಗುತ್ತದೆ. ಸಭೆಯಲ್ಲಿ 1-5ನೇ ಆರಂಭಕ್ಕೆ ಸಂಬಂಧಿಸಿದಂತೆ ಮನವಿ ಮಾಡಲಾಗುತ್ತದೆ. ಆದರೆ, ರಾಜ್ಯದಲ್ಲಿ ಈಗ ಡೆಂಗ್ಯೂ, ವೈರಲ್ ಫಿವರ್ ಇದೆ. ಈ ಕಾರಣದಿಂದ ಸದ್ಯ 3 ರಿಂದ 5ನೇ ತರಗತಿ ಆರಂಭದ ಬಗ್ಗೆ ಮನವಿ ಮಾಡಲಾಗುವುದು" ಎಂದಿದ್ದಾರೆ.