ಚಿಕ್ಕಬಳ್ಳಾಪುರ, ಸೆ.29 (DaijiworldNews/PY): ಬಿಜೆಪಿಯದ್ದು ತಾಲಿಬಾನ್ ಸಂಸ್ಕೃತಿ ಎಂದು ಹೇಳಿಕೆ ನೀಡಿದ್ದ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಹೇಳಿಕೆಗೆ ತಿರುಗೇಟು ನೀಡಿರುವ ಕೇಂದ್ರದ ಮಾಜಿ ಸಚಿವ ಡಿ ವಿ ಸದಾನಂದ ಗೌಡ ಅವರು," ಸಿದ್ದರಾಮಯ್ಯ ಅವರಿಗೆ ಸಂಪೂರ್ಣವಾಗಿ ತಲೆ ಕೆಟ್ಟಿದೆ" ಎಂದಿದ್ದಾರೆ.
ಚಿಕ್ಕಬಳ್ಳಾಪುರದಲ್ಲಿ ಮಾತನಾಡಿದ ಅವರು, "ರಾಜಕಾರಣ ಮಾಡುವವರಿಗೆ ಸ್ವಲ್ಪ ತಲೆಕೆಟ್ಟರೂ ಪರವಾಗಿಲ್ಲ. ಆದರೆ, ಪೂರ್ತಿ ತಲೆ ಕೆಟ್ಟಿರಬಾರದು. ಒಂದು ವೇಳೆ ಬಿಜೆಪಿಯದ್ದು ತಾಲಿಬಾನ್ ಆಡಳಿತವಾಗಿದ್ದರೆ ವಿಪಕ್ಷ ನಾಯ ಸಿದ್ದರಾಮಯ್ಯ ಅವರಿಗೆ ಕಾರಿನಲ್ಲಿ ಓಡಾಡಲು ಸಾಧ್ಯವಾಗುತ್ತಿತ್ತೇ?. ಇವರ ಕಾಲಿಗೆ ಹಗ್ಗ ಕಟ್ಟಿ ಬೀದಿಯಲ್ಲಿ ಎಳೆದುಕೊಂಡು ಹೋಗುತ್ತಾ ಇದ್ದರು. ಸಿದ್ದರಾಮಯ್ಯ ಮೊದಲು ಇದ್ದನ್ನು ಅರ್ಥ ಮಾಡಿಕೊಳ್ಳಬೇಕು. ಬದಲಾಗಿ ಬಾಯಿಗೆ ಬಂದಂತೆ ಮಾತನಾಡುವುದು ಸರಿಯಲ್ಲ. ಯಾರ್ಯಾರದ್ದು ಏನು ಲೂಸ್ ಆಗಿದೆ ಎಂದು ನನಗೆ ಗೊತ್ತಿಲ್ಲ. ಆದರೆ, ಸಿದ್ದರಾಮಯ್ಯ ಅವರ ತಲೆ ಸಂಪೂರ್ಣ ಲೂಸ್ ಆಗಿರುವುದು ನಿಜ" ಎಂದು ಲೇವಡಿ ಮಾಡಿದ್ದಾರೆ.
ಮತಾಂತರದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, "ಮತಾಂತರದ ಕುರಿತು ನಿರ್ದಾಕ್ಷಿಣ್ಯ ಕ್ರಮ ತೆಗೆದುಕೊಳ್ಳಬೇಕು ಎಂದು ಸರ್ಕಾರ ತೀರ್ಮಾನಿಸಿದೆ. ನೇರವಾಗಿ ಕಾರ್ಯಾಚರಣೆ ಮಾಡುವಂತೆ ಗೃಹ ಸಚಿವರು ಹಾಗೂ ಸಿಎಂ ಅವರು ತಿಳಿಸಿದ್ದಾರೆ" ಎಂದು ಹೇಳಿದ್ದಾರೆ.