ಠಾಣೆ, ಸೆ.29 (DaijiworldNews/PY): ಮಹಾರಾಷ್ಟ್ರದ ಠಾಣೆ ಜಿಲ್ಲೆಯ ಆರೋಗ್ಯ ಕೇಂದ್ರವೊಂದರಲ್ಲಿ ವ್ಯಕ್ತಿಯೋರ್ವರಿಗೆ ಕೊರೊನಾ ಲಸಿಕೆ ನೀಡುವ ಬದಲು ರೇಬಿಸ್ ನಿರೋಧಕ ಚುಚ್ಚುಮದ್ದು ನೀಡಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ವೈದ್ಯರು ಹಾಗೂ ದಾದಿಯರನ್ನು ಅಮಾನತುಗೊಳಿಸಲಾಗಿದೆ ಎಂದು ಅಧಿಕಾರಿಯೋರ್ವರು ಹೇಳಿದ್ದಾರೆ.
ಸೋಮವಾರದಂದು ಸ್ಥಳೀಯ ನಿವಾಸಿ ರಾಜ್ಕುಮಾರ್ ಯಾದವ್ ಎನ್ನುವವರು ಕೊರೊನಾ ಲಸಿಕೆ ಹಾಕಿಸಿಕೊಳ್ಳಲು ಕಲ್ವಾ ಪ್ರದೇಶದ ಆರೋಗ್ಯ ಕೇಂದ್ರಕ್ಕೆ ಹೋಗಿದ್ದರು.
"ರಾಜ್ ಕುಮಾರ್ ಯಾದವ್ ಅವರು ಕೊರೊನಾ ಲಸಿಕೆ ಹಾಕಿಸಿಕೊಳ್ಳಲು ಬೇರೆ ಸಾಲಿನಲ್ಲಿ ನಿಂತಿದ್ದರು. ಲಸಿಕೆ ಹಾಕಿಸಿಕೊಂಡ ಬಳಿಕ ಅವರಿಗೆ ರೇಬಿಸ್ ನಿರೋಧಕ ಚುಚ್ಚುಮದ್ದು ನೀಡಲಾಗಿದೆ ಎಂದು ತಿಳಿಸಲಾಗಿದೆ" ಎಂದು ಠಾಣೆ ಮಹಾನಗರ ಪಾಲಿಕೆಯ ವಕ್ತಾರರು ಸುದ್ದಿಗಾರರಿಗೆ ಮಾಹಿತಿ ನೀಡಿದ್ದಾರೆ.
"ವಿಷಯ ತಿಳಿದ ರಾಜ್ ಕುಮಾರ್ ಯಾದವ್ ಅವರು ಗಾಬರಿಗೊಳಗಾದರು, ಆದರೆ, ಯಾವುದೇ ರೀತಿಯಾದ ಗಂಭೀರ ಪರಿಣಾಮಗಳು ಆಗಿಲ್ಲ. ಅವರು ಆರೋಗ್ಯವಾಗಿದ್ದಾರೆ" ಎಂದು ತಿಳಿಸಿದ್ದಾರೆ.
"ಈ ಬಗ್ಗೆ ದೂರು ದಾಖಲಿಸಲಾಗಿದ್ದು, ನಿರ್ಲಕ್ಷ್ಯ ವಹಿಸಿದ ಆರೋಪದ ಹಿನ್ನೆಲೆ ಮಹಿಳಾ ವೈದ್ಯರು ಹಾಗೂ ದಾದಿಯನ್ನು ಅಮಾನತುಗೊಳಿಸಲಾಗಿದೆ" ಎಂದು ಅಧಿಕಾರಿ ಹೇಳಿದ್ದಾರೆ.