ಜೋಧಪುರ್, ಸೆ.29 (DaijiworldNews/PY): "ರಾಜಕೀಯ ಪಕ್ಷಗಳನ್ನು ಬದಲಿಸುವುದರಲ್ಲಿ ತಪ್ಪಿಲ್ಲ. ಆದರೆ, ಪಕ್ಷಗಳನ್ನು ಕೇವಲ ಅಧಿಕಾರದ ಆಸೆಗೆ ಬದಲಿಸಬಾರದು" ಎಂದು ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ತಿಳಿಸಿದ್ದಾರೆ.
ಜೋಧಪುರ್ನಲ್ಲಿ ಐಐಟಿ ವಿದ್ಯಾರ್ಥಿಗಳ ಜೊತೆಗಿನ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, "ಯುವ ಜನಾಂಗ ಪಾಲಿಟಿಕ್ಸ್ಗೆ ಬರಬೇಕು. ಬದಲಾಗಿ ಪೋಲಿಟ್ರಿಕ್ಸ್ಗೆ ಅಲ್ಲ" ಎಂದಿದ್ದಾರೆ.
"ನೀವು ಬಯಸಿದ ಪಕ್ಷವನ್ನು ಸೇರ್ಪಡೆಗೊಂಡು, ತಂಡವಾಗಿ ಕೆಲಸ ಮಾಡಿ. ಸ್ಪರ್ಧಾತ್ಮಕ ಗುಣಗಳನ್ನು ಮೈಗೂಡಿಸಿಕೊಳ್ಳಿ. ಮೌಲ್ಯಾಧಾರಿತ ರಾಜಕಾರಣ ಮಾಡಿ" ಎಂದು ಹೇಳಿದ್ದಾರೆ.
ಈ ಸಂದರ್ಭ ವಿದ್ಯಾರ್ಥಿಗಳಿಗೆ ರಾಜಕೀಯದ ಕುರಿತು ಸುಲಭವಾಗಿ ಅರ್ಥೈಸಿಕೊಳ್ಳಲು 4ಸಿ ಸೂತ್ರಗಳನ್ನು ತಿಳಿಸಿದ ಅವರು, "ಕ್ಯಾರೆಕ್ಟರ್, ಕೆಪಾಸಿಟಿ, ಕಂಡಕ್ಟ್ ಹಾಗೂ ಕ್ಯಾಲಿಬರ್. ಆದರೆ, ದುರಾದೃಷ್ಟಕ್ಕೆ ಇಂದಿನ ರಾಜಕಾರಣದಲ್ಲಿ ಬೇರೆ ರೀತಿಯಾದ 4ಸಿಗಳನ್ನು ಅಂದರೆ, ಕಾಸ್ಟ್, ಕಮ್ಯೂನಿಟಿ, ಕ್ಯಾಶ್ ಹಾಗೂ ಕ್ರಿಮಿನಾಲಿಟಿ ಎನ್ನುವ ಗುಣಗಳನ್ನು ಅಳವಡಿಸಿಕೊಂಡಿದ್ದಾರೆ" ಎಂದಿದ್ದಾರೆ.
"ಕೆಲವರು ಮಕ್ಕಳು ಬದಲಿಸಿದಂತೆ ಪಕ್ಷ ಬದಲಿಸುತ್ತಲೇ ಇರುತ್ತಾರೆ. ಪಕ್ಷ ಬದಲಿಸುವುದು ತಪ್ಪಲ್ಲ. ಆದರೆ, ಅಧಿಕಾರದ ಆಸೆಗೆ ಪಕ್ಷ ಬದಲಿಸವುದು ಸರಿಯಲ್ಲ. ಪ್ರಸ್ತುತ ಇದೇ ಆಗುತ್ತಿದ್ದು, ನನಗೆ ಈ ಬಗ್ಗೆ ಚಿಂತೆಯಾಗಿದೆ" ಎಂದು ಹೇಳಿದ್ದಾರೆ.