ಅಯೋಧ್ಯೆ, ಸೆ 29 (DaijiworldNews/MS): ಅಕ್ಟೋಬರ್ 2 ರೊಳಗೆ ಕೇಂದ್ರ ಸರ್ಕಾರವು ಭಾರತವನ್ನು 'ಹಿಂದೂ ರಾಷ್ಟ್ರ' ಎಂದು ಘೋಷಿಸಬೇಕು ಇಲ್ಲವಾದಲ್ಲಿ ಸರಯು ನದಿಯಲ್ಲಿ ಜಲ ಸಮಾಧಿಯಾಗುವುದಾಗಿ ತಪಸ್ವಿ ಛಾವಣಿಯ ಉತ್ತರಾಧಿಕಾರಿ ಮಹಂತ್ ಪರಮಹಂಸ್ ದಾಸ್ ಘೋಷಿಸಿದ್ದಾರೆ.
ಮಾಧ್ಯಮದೊಂದಿಗೆ ಮಾತನಾಡಿರುವ ಅವರು, ದೇಶದ ನಾಗರಿಕರನ್ನು ರಕ್ಷಿಸಲು ಭಾರತವನ್ನು ಹಿಂದೂ ರಾಷ್ಟ್ರವೆಂದು ಘೋಷಿಸುವುದು ಬಹಳ ಮುಖ್ಯ ಭಾರತವನ್ನು ಹಿಂದೂ ರಾಷ್ಟ್ರವೆಂದು ಘೋಷಿಸದಿದ್ದರೆ ಅ.1ರಂದು ಸಂತರ ಧಾರ್ಮಿಕ ಸಮ್ಮೇಳನ ಆಯೋಜಿಸಿ, ಅ.2ರಂದು ಜಲಸಮಾಧಿಯಾಗುತ್ತೇನೆ .ಇನ್ನು ನಾನು ಸಂತರ ಸಂಪ್ರದಾಯವನ್ನು ಅನುಸರಿಸಿದ್ದೇನೆ. ಸಾವಿನ ನಂತರ ಮಾಡಬೇಕಾದ ಕ್ರಿಯೆಗಳನ್ನು ಮೊದಲೇ ಮಾಡಿ ಮುಗಿಸಿದ್ದೇನೆ. ವೇದ ಮಂತ್ರಗಳ ಮೂಲಕ ನಾನು ಧರಿಸಿರುವ ಕವಚವನ್ನು ಶುದ್ಧೀಕರಿಸಿದ್ದೇನೆ. ಈ ಕವಚವನ್ನು ನನ್ನ ಮೇಲೆ ಹಾಕಿಕೊಂಡು, ನಾನು ಅಕ್ಟೋಬರ್ 2 ರಂದು ಜಲ ಸಮಾಧಿಯಾಗುತ್ತೇನೆ" ಎಂದು ಹೇಳಿದ್ದಾರೆ.
ದೇಶದ ಜನರ ಹಿತಾಸಕ್ತಿ ಮತ್ತು ಸಾಮಾಜಿಕ ಹಿತದೃಷ್ಟಿಯಿಂದ ಈ ದೇಶವನ್ನು ಹಿಂದೂ ರಾಷ್ಟ್ರ ಎಂದು ಘೋಷಿಸಬೇಕು ಎಂದು ನಾನು ದೇಶದ ಪ್ರಧಾನಿ ನರೇಂದ್ರ ಮೋದಿ ಮತ್ತು ರಾಜ್ಯದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಮುಂದೆ ಬೇಡಿಕೆ ಇಟ್ಟಿದ್ದೇನೆ ಎಂದು ತಿಳಿಸಿದ್ದಾರೆ.
ದೇಶದ ಕಾನೂನು ಸುವ್ಯವಸ್ಥೆ ಮತ್ತು ಸಂವಿಧಾನವು ಅಪಾಯಕ್ಕೆ ಸಿಲುಕುತ್ತದೆ. ಇಂತಹ ಪರಿಸ್ಥಿತಿ ಬರದಂತೆ ಈ ದೇಶವನ್ನು ಹಿಂದೂ ರಾಷ್ಟ್ರವೆಂದು ಘೋಷಿಸುವುದು ಬಹಳ ಮುಖ್ಯ. ಹಾಗೆ ಮಾಡದಿದ್ದಲ್ಲಿ ಅಕ್ಟೋಬರ್ 2 ರಂದು ನಾನು ಜಲ ಸಮಾಧಿಯಾಗುತ್ತೇನೆ ಎಂದು ಘೋಷಣೆ ಮಾಡಿದ್ದಾರೆ.
ಭಾರತವನ್ನು 'ಹಿಂದೂ ರಾಷ್ಟ್ರ' ಎಂದು ಘೋಷಿಸಲು ಅವರು ಒತ್ತಾಯಿಸುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆ, ಅವರು ತಮ್ಮ ಬೇಡಿಕೆಯನ್ನು ಮುಂದಿಟ್ಟುಕೊಂಡು 15 ದಿನಗಳ ಕಾಲ ಉಪವಾಸ ಕೈಗೊಂಡು ಆಮರಣಾಂತ ಮಾಡಿದರು. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಂದ ಭರವಸೆ ಪಡೆದ ನಂತರ ಅವರು ಉಪವಾಸ ಮುರಿದರು.