ಬೆಂಗಳೂರು, ಸೆ 28 (DaijiworldNews/MS): ವಿಪಕ್ಷ ನಾಯಕ ಸಿದ್ದರಾಮಯ್ಯ ಆರೆಸ್ಸೆಸ್ ಸಂಘಟನೆಯ ವಿರುದ್ದ ಕಿಡಿಕಾರಿದ್ದು ಆರ್ ಎಸ್ ಎಸ್ ಎಂದರೆ ಏನು ಸಾಮಾಜಿಕ ಸೇವಾ ಸಂಘಟನೆಯೇ? ಸಾರ್ವಜನಿಕ ದತ್ತಿಯೇ? ಇಲ್ಲವೇ ಬಿಜೆಪಿ ಎಂಬ ರಾಜಕೀಯ ಪಕ್ಷಕ್ಕೆ ನಾಯಕರನ್ನು ಉತ್ಪಾದಿಸಿ ಕೊಡುವ ಕಾರ್ಖಾನೆಯೇ? ಎಂದು ಪ್ರಶ್ನಿಸಿದ್ದಾರೆ.
ಈ ಬಗ್ಗೆ ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಸರಣಿ ಟ್ವೀಟ್ ಮಾಡಿರುವ ಅವರು, " ಆರ್ ಎಸ್ ಎಸ್ ಎಂದ ಕೂಡಲೇ ಉರಿದುಬೀಳುವ ಸಿಟಿ ರವಿ ಅವರೇ, ಆರ್ ಎಸ್ ಎಸ್ ಎಂದರೆ ಏನು? ಅದರ ಜೊತೆ ಬಿಜೆಪಿ ಪಕ್ಷಕ್ಕೆ ಸಂಬಂಧ ಏನು?ಆರ್ ಎಸ್ ಎಸ್ ಎಂದರೆ ಏನು ಸಾಮಾಜಿಕ ಸೇವಾ ಸಂಘಟನೆಯೇ? ಸಾರ್ವಜನಿಕ ದತ್ತಿಯೇ? ಇಲ್ಲವೇ ಬಿಜೆಪಿ ಎಂಬ ರಾಜಕೀಯ ಪಕ್ಷಕ್ಕೆ ನಾಯಕರನ್ನುಉತ್ಪಾದಿಸಿ ಕೊಡುವ ಕಾರ್ಖಾನೆಯೇ? ಎಂದು ಮಾತಿನಲ್ಲೇ ತಿವಿದಿದ್ದಾರೆ.
ಆರೆಸ್ಸೆಸ್ ಎನ್ನುವುದು ಹಿಂದುಗಳ ಸಂಘಟನೆ ಎಂದು ನೀವು ಹೇಳುವುದಾದಾರೆ ಬಿಜೆಪಿಯಲ್ಲಿರುವವರು ಮಾತ್ರ ಹಿಂದೂಗಳೇ? ಬೇರೆ ಪಕ್ಷದವರು ಹಿಂದೂಗಳಲ್ಲವೇ? ದೆಹಲಿಯಲ್ಲಿ 10 ತಿಂಗಳಿಂದ ಬೀದಿಯಲ್ಲಿರುವವರು ಹಿಂದುಗಳಲ್ಲವೇ?ವಾರದ ಹಿಂದೆ ಉತ್ತರಪ್ರದೇಶದಲ್ಲಿ ಅತ್ಯಾಚಾರಕ್ಕೀಡಾದ ದಲಿತ ಯುವತಿ ಹಿಂದು ಅಲ್ಲವೇ? ಆರೆಸ್ಸೆಸ್ ಸಾಂಸ್ಕೃತಿಕ ಸಂಘಟನೆ ಎಂದಾದರೆ ಅದರ ಸಂಸ್ಕೃತಿಯ ವ್ಯಾಖ್ಯಾನವೇನು? ನಿನ್ನೆ ತಾನೆ ಮಂಗಳೂರಿನಲ್ಲಿ ಅಮಾಯಕ ವಿದ್ಯಾರ್ಥಿ-ವಿದ್ಯಾರ್ಥಿನಿಗಳ ಮೇಲೆ ನಿಮ್ಮ ಪರಿವಾರದ ಗೂಂಡಾಗಳು ನಡೆಸಿದ ದೌರ್ಜನ್ಯ ಕೂಡಾ ಈ ಸಂಸ್ಕೃತಿಯಲ್ಲಿ ಸೇರಿದೆಯೇ? ಎಂದು ಪ್ರಶ್ನಿಸಿದ್ದಾರೆ.
ದೇಶ ಮತ್ತು ಹಿಂದುಗಳ ರಕ್ಷಣೆ ಮಾಡಲು ಆರೆಸ್ಸೆಸ್ ನಾಯಕರಿಗೆ ಗುತ್ತಿಗೆ ಕೊಟ್ಟವರಾರು? ಆರ್ ಎಸ್ ಎಸ್ ನಾಯಕರೇನು ಜನರಿಂದ ಚುನಾಯಿತರಾದ ನಾಯಕರೇ? ಅವರು ಯಾಕೆ ಚುನಾವಣೆಯಲ್ಲಿ ಸ್ಪರ್ಧಿಸಬಾರದು? ನಿಮ್ಮ ಎರಡು ಸಂಘಟನೆಗಳ ನಡುವೆ ಮುಖ ಯಾವುದು? ಮುಖವಾಡ ಯಾವುದು? ನಾನು ಮತ್ತು ನನ್ನಂತಹ ಕೋಟ್ಯಂತರ ಜನ ನಿರ್ಭೀತಿ ಮತ್ತು ಆತ್ಮಗೌರವದಿಂದ ಬದುಕುತ್ತಿರುವುದು ಅಂಬೇಡ್ಕರ್ ಅವರು ಕೊಟ್ಟ ಸಂವಿಧಾನದಿಂದ. ನಿಮ್ಮ ಪರಿವಾರದ ತಾಲಿಬಾನ್ ಗಿರಿಯನ್ನು ಅದೇ ಸಂವಿಧಾನದಿಂದ ಹಿಮ್ಮೆಟ್ಟಿಸುತ್ತೇವೆ ಎಂದು ಹೇಳಿದ್ದಾರೆ.
ಸಿ.ಟಿ ರವಿ ಅವರೇ, ನಿಮ್ಮನ್ನು ರೈತನ ಮಗ ಎನ್ನುತ್ತೀರಿ, ನಾನು ಉಡುವ ರೈತ ಮಕ್ಕಳ ಪಂಚೆಯನ್ನು ಗೇಲಿ ಮಾಡುತ್ತೀರಿ. ನಿಮ್ಮ ತಂದೆ ಕೂಡಾ ಪಂಚೆ ಉಡುವವರು ಎಂದು ಅಂದುಕೊಳ್ತೀನಿ. ನಿಮ್ಮಂತಹ ಮಗನ ಬಗ್ಗೆ ಅವರೇನು ಅಂದುಕೊಳ್ಳಬಹುದು ಯೋಚಿಸಿದ್ದೀರಾ? ಈ ರೀತಿ ನಾಲಿಗೆ ಸಡಿಲ ಬಿಟ್ಟು ಮನೆಗೆ ಹೋಗುವಾಗ ಹುಷಾರಾಗಿರಿ. ಕಣ್ಣಿಗೆ ಪೊರೆ ಬಂದವರು ಕತ್ತಲಲ್ಲಿ ಕಾರು ಚಲಾಯಿಸಬಾರದು, ಅಪಘಾತವಾಗಿ ಅಮಾಯಕರು ಜೀವ ಕಳೆದುಕೊಳ್ಳುತ್ತಾರೆ. ಪೊರೆ ಬಂದಿದ್ದರೆ ಕ್ಯಾಟಾರಕ್ಟ್ ಮಾಡಿಸಿಕೊಳ್ಳಿ. ಸಾರ್ವಜನಿಕರ ಜೀವ ಮುಖ್ಯ ಎಂದು ಸಿಟಿ ರವಿ ಸಲಹೆ ನೀಡಿದ್ದಾರೆ.