ನವದೆಹಲಿ, ಸೆ 28 (DaijiworldNews/MS): ಪಂಜಾಬ್ ಕಾಂಗ್ರೆಸ್ ಪಕ್ಷದಲ್ಲಿನ ಬೆಳವಣಿಗೆಯಿಂದ ಬೇಸರಗೊಂಡು ಮುಖ್ಯಮಂತ್ರಿ ಹುದ್ದೆಗೆ ಕ್ಯಾಪ್ಟನ್ ಅಮರೀಂದರ್ ಸಿಂಗ್ ಪಕ್ಷವನ್ನೇ ಬಿಟ್ಟು ಬಿಜೆಪಿ ಸೇರಲಿದ್ದಾರೆ ಎಂಬ ಭಾರಿ ಸುದ್ದಿ ರಾಜಕೀಯ ವಲಯದಲ್ಲಿ ಸುಳಿದಾಡುತ್ತಿದೆ. ಅಷ್ಟೇ ಅಲ್ಲದೇ ಅವರಿಗೆ ಪ್ರಧಾನಿ ಮೋದಿ ಸಂಪುಟದಲ್ಲಿ ಕೇಂದ್ರ ಕೃಷಿ ಸಚಿವ ಸ್ಥಾನ ಸಿಗಲಿದೆ ಎಂಬ ವದಂತಿ ದಟ್ಟವಾಗಿದೆ.
ಅಮರೀಂದರ್ ಸಿಂಗ್ ದೆಹಲಿಗೆ ಭೇಟಿ ನೀಡಿದ್ದು, ಈ ಸಂದರ್ಭದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಷಾ ಮತ್ತು ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಅವರನ್ನು ಭೇಟಿ ಮಾಡಲಿದ್ದಾರೆ ಎಂದು ವರದಿಯಾಗಿದೆ.
ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ನವಜೋತ್ ಸಿಂಗ್ ಸಿಧು ಬಣ ಹಾಗೂ ಅಮರೀಂದರ್ ಸಿಂಗ್ ಬಣದ ನಡುವೆ ನಡೆದ ಶೀತಲ ಸಮರದಲ್ಲಿ ಅಮರೀಂದರ್ ಸಿಂಗ್ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸುವಲ್ಲಿ ಯಶಸ್ವಿಯಾಗಿದ್ದರು. ರಾಜೀನಾಮೆಯ ಬಳಿಕ ಪಂಜಾಬ್ ನ ಮಾಜಿ ಮುಖ್ಯಮಂತ್ರಿ ನಡೆ ಕುತೂಹಲವಾಗಿ ಉಳಿದಿದೆ.
ಇದೀಗ ಕಾಂಗ್ರೆಸ್ ತೊರೆದು ಬಿಜೆಪಿ ಸೇರಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದ್ದು, ಇದಕ್ಕೆ ಅವರ ದೆಹಲಿ ಭೇಟಿ ಪುಷ್ಟಿ ನೀಡುವಂತಿದೆ. ಆದರೆ ಅಮರಿಂದರ್ ಸಿಂಗ್ ಅವರ ಮಾಧ್ಯಮ ಸಲಹೆಗಾರ ರವೀನ್ ತುಕ್ರಾಲ್ ಸಿಂಗ್ ಅವರು ಖಾಸಗಿ ಭೇಟಿಗೆ ದೆಹಲಿಗೆ ಹೋಗಿದ್ದಾರಷ್ಟೇ. ಇದರಲ್ಲಿ ರಾಜಕೀಯವೇನೂ ಇಲ್ಲ ಎಂದು ಟ್ವಿಟ್ ಮಾಡಿದ್ದಾರೆ.