ಮೈಸೂರು, ಸೆ.28 (DaijiworldNews/HR): ಜನರಲ್ಲಿ ಆತ್ಮವಿಶ್ವಾಸ ತುಂಬಲು ಪೊಲೀಸರಲ್ಲಿ ಹೃದಯವಂತಿಕೆ ಬೇಕೇ ಹೊರತು ಕಠಿಣ ನಿರ್ಧಾರಗಳಲ್ಲ ಎಂದು ಗೃಹ ಸಚಿವ ಅರಗ ಜ್ಞಾನೆಂದ್ರ ಹೇಳಿದ್ದಾರೆ.
ಈ ಕುರಿತು ಮಾತನಾಡಿದ ಅವರು, "ವೈರಿ ರಾಷ್ಟ್ರಗಳಿಂದ ಬರುವ ನಮ್ಮ ಶತ್ರುಗಳನ್ನು ದಮನ ಮಾಡಲು ನಮ್ಮ ಸೇನೆ ಸನ್ನದ್ಧವಾಗಿದೆ. ಅಂತೆಯೇ ನಮ್ಮದು ವಿಸ್ತಾರದಲ್ಲಿ ದೊಡ್ಡ ದೇಶ, 133ಕೋಟಿ ಜನಸಂಖ್ಯೆ ಇದ್ದು, ದೇಶದ ಆಂತರಿಕ ಭದ್ರತೆಯನ್ನು ಗಟ್ಟಿಗೊಳಿಸಿ ದೇಶದ ನಾಗರಿಕರ ಮಾನ, ಪ್ರಾಣ ಸ್ವತ್ತು, ಶಾಂತಿ ಸುವ್ಯವಸ್ಥೆಯನ್ನು ಕಾಪಾಡುವಂತಹ ಬಹಳ ದೊಡ್ಡ ಹೊಣೆಗಾರಿಕೆಯನ್ನು ಪೊಲೀಸ್ ಇಲಾಖೆ ನಿರ್ವಹಿಸುತ್ತಿದೆ" ಎಂದು ಶ್ಲಾಘಿಸಿದರು.
ಇನ್ನು "ಪೊಲೀಸ್ ಇಲಾಖೆಯ ಶಿಸ್ತು ಸಂಯಮ, ಜನರ ಮನಸ್ಸಿನಲ್ಲಿ ಪೊಲೀಸ್ ಎನ್ನುವ ಭಯ ಇರಬಾರದು. ಸಾಮಾನ್ಯ ಜನರಿಗೆ ಪೊಲೀಸ್ ಎಂದರೆ ನಮ್ಮ ರಕ್ಷಕರು ಸ್ನೇಹಿತರು ಎನ್ನುವ ಭಾವನೆ ಇರಬೇಕು. ಅಪರಾಧಿಗಳಿಗೆ, ದರೋಡೆಕೋರರಿಗೆ, ಕಳ್ಳರಿಗೆ ಇವರಿಗೆ ಭಯ ಇರಬೇಕೇ ಹೊರತು ಸಾಮಾನ್ಯರಿಗಲ್ಲ" ಎಂದರು.
ರಾಜ್ಯದಲ್ಲಿ ದಾಖಲಾದ ಒಟ್ಟು ಪ್ರಕರಣಗಳಲ್ಲಿ ಶೇ.30ರಷ್ಟು ಮಹಿಳಾ ಮತ್ತು ಮಕ್ಕಳ ಮೇಲಿನ ದೌರ್ಜನ್ಯದ ಪ್ರಕರಣಗಳಾಗಿದ್ದು, ಅನೇಕ ಸಂದರ್ಭಗಳಲ್ಲಿ ಮಹಿಳೆ ದೂರು ನೀಡಲು ಬಂದಾಗ ತನ್ನೆಲ್ಲ ಹೇಳಿಕೆ ನೀಡಲು ಗಂಡಸರು ಬಳಿ ಸಮಸ್ಯೆ ಹೇಳಲು ಮುಜುಗರ. ಇಂತಹ ಸಂದರ್ಭದಲ್ಲಿ ಮಹಿಳಾ ಸಿಬ್ಬಂದಿ ಇರಬೇಕು" ಎಂದು ಹೇಳಿದ್ದಾರೆ.