ಬೆಂಗಳೂರು, ಸೆ 28 (DaijiworldNews/MS): ಒಂದೇ ವಾಹನದಲ್ಲಿ ಅನ್ಯ ಕೋಮಿನ ಯುವಕ ಯುವತಿಯರು ಜೊತೆಯಾಗಿ ಪ್ರಯಾಣಿಸಿದರು ಎಂಬ ಕಾರಣಕ್ಕೆ ಮಂಗಳೂರಿನ ಸುರತ್ಕಲ್ ಬಳಿ ಹಿಂದೂ ಸಂಘಟನೆ ಯುವಕರು ತಡೆದು ಪ್ರಶ್ನಿಸಿ, ನಿಂದಿಸಿದ ಘಟನೆಯ ಕುರಿತಾಗಿ ಪ್ರತಿಕ್ರಿಯಿಸಿರುವ ವಿಪಕ್ಷ ನಾಯಕ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಗಳೂರಿನಲ್ಲಿ ಇರುವುದು ಬಿಜೆಪಿ ಸರ್ಕಾರನಾ? ತಾಲಿಬಾನ್ಗಳದ್ದಾ? ಎಂದು ಪ್ರಶ್ನಿಸಿದ್ದಾರೆ.
ಈ ಬಗ್ಗೆ ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಟ್ವೀಟ್ ಮಾಡಿರುವ ಅವರು, " ಸನ್ಮಾನ್ಯ ಕರ್ನಾಟಕದ ಮುಖ್ಯಮಂತ್ರಿಗಳೇ , ಮಂಗಳೂರಿನಲ್ಲಿ ಇರುವುದು ಬಿಜೆಪಿ ಆಡಳಿತದ ಸರ್ಕಾರನಾ? ತಾಲಿಬಾನ್ಗಳದ್ದಾ? ಎಂದು ಪ್ರಶ್ನಿಸಿದ್ದಾರೆ.
ಮಂಗಳೂರಿನ ಸುರತ್ಕಲ್ ಬಳಿ ಕಾಲೇಜೊಂದರ ವಿದ್ಯಾರ್ಥಿ ವಿದ್ಯಾರ್ಥಿನಿಯರು ಮಲ್ಪೆ ಬೀಚ್ ಗೆ ತಿರುಗಾಡಲು ಬಂದು ವಾಪಾಸಾಗುವ ವೇಳೆ ಸುರತ್ಕಲ್ ಟೋಲ್ ಗೇಟ್ ಬಳಿ ಸಂಘಟನೆಯೊಂದರ ಕಾರ್ಯಕರ್ತರು ಕಾರಿನಲ್ಲಿ ಎರಡು ಕೋಮಿನ ವಿದ್ಯಾರ್ಥಿ ವಿದ್ಯಾರ್ಥಿನಿಯರು ಜೊತೆಯಾಗಿ ತೆರಳಿದ್ದಾರೆ ಎಂಬ ಮಾಹಿತಿಯ ಮೇರೆಗೆ ತಡೆದು ಪ್ರಶ್ನಿಸಿ, ನಿಂದಿಸಿದ್ದರು. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಈ ಘಟನೆಗೆ ಸಂಬಂಧ ಈಗಾಗಲೇ ವಿದ್ಯಾರ್ಥಿ ಸವಿಯೊ ಟಿ ಅಲೋನ್ಸೊ (20) ಸಲ್ಲಿಸಿದ ದೂರಿನ ಆಧಾರದ ಮೇಲೆ, ಸುರತ್ಕಲ್ ಪೊಲೀಸರು ಐವರು ಬಂಧಿಸಿದ್ದಾರೆ.