ನವದೆಹಲಿ, ಸೆ.28 (DaijiworldNews/HR): ಗೀತ ರಚನೆಕಾರ ಜಾವೇದ್ ಅಖ್ತರ್ ಅವರು ಆರ್ಎಸ್ಎಸ್ ಅನ್ನು ತಾಲಿಬಾನ್ಗೆ ಹೋಲಿಕೆ ಮಾಡಿದ್ದು, ಅವರ ವಿರುದ್ಧ ಆರ್ಎಸ್ಎಸ್ ಕಾರ್ಯಕರ್ತ ವಿವೇಕ್ ಚಂಪಾನೇಕರ್ ಮಾನನಷ್ಟ ಮೊಕದ್ದಮೆಯನ್ನು ಹೂಡಿದ್ದರು. ಈ ಸಂಬಂಧ ಅರ್ಜಿ ಕೈಗೆತ್ತಿಕೊಂಡ ಥಾಣೆ ಕೋರ್ಟ್ ಜಾವೇದ್ ಅಖ್ತರ್ಗೆ ನೋಟಿಸ್ ಕಳುಹಿಸಿದ್ದು, ನವೆಂಬರ್ 12ರಂದು ವಿಚಾರಣೆ ಹಾಜರಾಗುವಂತೆ ಸೂಚನೆ ನೀಡಲಾಗಿದೆ.
ಜಾವೇದ್ ಅಖ್ತರ್ ಅವರು ಆರಂಭದಲ್ಲಿ ತಾಲಿಬಾನಿಗಳು ಇಸ್ಲಾಮಿಕ್ ದೇಶವನ್ನು ಬಯಸುತ್ತಾರೆ. ಈ ಜನರು ಹಿಂದೂ ರಾಷ್ಟ್ರವನ್ನು ನಿರ್ಮಿಸಲು ಬಯಸುತ್ತಾರೆ ಎಂದು ಹೇಳಿದ್ದರು. ಆರ್ಎಸ್ಎಸ್ ಹೆಸರನ್ನು ಹೇಳದೇ ಜಾವೇದ್ ಅಖ್ತರ್ ಈ ಹೇಳಿಕೆ ನೀಡಿದ್ದರೂ ಕೂಡ ಸಾಕಷ್ಟು ವಿವಾದಕ್ಕೆ ಕಾರಣವಾಗಿತ್ತು.
ಇನ್ನು ಜಾವೇದ್ ಅಖ್ತರ್ ನೀಡಿರುವ ಈ ಹೇಳಿಕೆಯು ಸಾಮಾನ್ಯ ಜನರ ದೃಷ್ಠಿಯಲ್ಲಿ ಆರ್ಎಸ್ಎಸ್ ಚಿತ್ರಣವನ್ನು ಹಾಳು ಮಾಡುವಂತಿದೆ. ಅನಾಗರಿಕ ತಾಲಿಬಾನ್ ಹಾಗೂ ಹಿಂದೂ ಧರ್ಮದ ಉದ್ಧಾರಕ್ಕಾಗಿ ಶ್ರಮಿಸುತ್ತಿರುವ ಸಂಘಟನೆಗಳನ್ನು ಒಂದೇ ಎಂದು ಹೇಳಿರುವುದು ಖಂಡನೀಯ ಎಂದು ವಿವೇಕ್ ಹೇಳಿದ್ದಾರೆ.