ನವದೆಹಲಿ, ಸೆ 27(DaijiworldNews/MS): ಇ -ಕಾಮರ್ಸ್ ದೈತ್ಯ ಅಮೆಜಾನ್ ವಿರುದ್ದ ಆರ್.ಎಸ್.ಎಸ್. ಮುಖವಾಣಿ ಪಾಂಚಜನ್ಯ ಪತ್ರಿಕೆಯಲ್ಲಿ ಕಿಡಿಕಾರಿದ್ದು ಅಮೆಜಾನ್ ಕಂಪನಿ ಅನ್ನು "ಈಸ್ಟ್ ಇಂಡಿಯಾ ಕಂಪನಿ 2.0" ಎಂದು ಕರೆದಿದೆ. ಮಾತ್ರವಲ್ಲ"ಸ್ಥಳೀಯ ಉದ್ಯಮಶೀಲತೆಗೆ ಅಪಾಯ" ಎಂದು ಹೇಳಿದೆ.
ಪಾಂಚಜನ್ಯ ಸಂಪಾದಕ ಹಿತೇಶ್ ಶಂಕರ್ ಸೋಮವಾರ ಪತ್ರಿಕೆಯ ಹೊಸ ಸಂಚಿಕೆಯ ಮುಖಪುಟವನ್ನು ಟ್ವೀಟ್ ಮಾದಿದ್ದು , ಇದರಲ್ಲಿ ಅಮೆಜಾನ್ ಸಿಇಒ ಜೆಫ್ ಬೆಜೋಸ್ ಪೋಟೇ ಇದ್ದು "#ಅಮೆಜಾನ್: ಈಸ್ಟ್ ಇಂಡಿಯಾ ಕಂಪನಿ 2.0" ಎಂಬ ಶೀರ್ಷಿಕೆ ಇದೆ.
ಭಾರತೀಯ ಮಾರುಕಟ್ಟೆಯಲ್ಲಿ ಏಕಸ್ವಾಮ್ಯ ಸಾಧಿಸಲು ಅಮೆಜಾನ್ ಯತ್ನಿಸುತ್ತಿದೆ. 18ನೇ ಶತಮಾನದಲ್ಲಿ ಈಸ್ಟ್ ಇಂಡಿಯಾ ಕಂಪನಿ ಭಾರತ ಆಕ್ರಮಿಸಿಕೊಳ್ಳಲು ಮಾಡಿದ ಪ್ರಯತ್ನವನ್ನೇ ಇದೀಗ ಅಮೆಜಾನ್ ಕಂಪನಿ ಮಾಡುತ್ತಿದೆ. ಭಾರತದಲ್ಲಿ ತನಗೆ ಅನುಕೂಲಕರವಾದ ನೀತಿಗಳನ್ನು ರೂಪಿಸಿಕೊಳ್ಳಲು ಅಮೆಜಾನ್ ಕೋಟ್ಯಂತರ ರೂಪಾಯಿ ಲಂಚ ನೀಡಿದೆ ಎಂದು ಆರೋಪಿಸಲಾಗಿದೆ. ಈ ಹಿನ್ನೆಲೆಯಲ್ಲಿ ಅಮೆಜಾನ್ ವಿರುದ್ಧ ತನಿಖೆ ನಡೆಯಬೇಕು ಎಂದು ಪಾಂಚಜನ್ಯದಲ್ಲಿ ಆಗ್ರಹಿಸಲಾಗಿದೆ.
ಇನ್ನು ಇದಕ್ಕೆ ಪ್ರತಿಯಾಗಿ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅಮೆಜಾನ್, " ಕೊವೀಡ್ ಸಾಂಕ್ರಾಮಿಕ ಸಮಯದಲ್ಲಿ 450ಕ್ಕೂ ಹೆಚ್ಚಿನ ನಗರಗಳಿಂದ ಪೀಠೋಪಕರಣಗಳು, ಲೇಖನ ಸಾಮಗ್ರಿಗಳು, ಎಲೆಕ್ಟ್ರಾನಿಕ್ಸ್, ಸೌಂದರ್ಯ ಉತ್ಪನ್ನಗಳು, ಮೊಬೈಲ್ ಫೋನ್ಗಳು, ಉಡುಪುಗಳು, ವೈದ್ಯಕೀಯ ಉತ್ಪನ್ನಗಳು ಹೀಗೆ ಸುಮಾರು ಮೂರು ಲಕ್ಷ ಹೊಸ ಮಾರಾಟಗಾರರು ನಮ್ಮೊಂದಿಗೆ ಸೇರಿಕೊಂಡಿದ್ದಾರೆ ಇದರಲ್ಲಿ 75,000 ಸ್ಥಳೀಯ ಅಂಗಡಿಯ ಮಾರಾಟಗಾರಾಗಿದ್ದಾರೆ ಎಂದು ಹೇಳಿದೆ.
ಇದಲ್ಲದೆ ಅಮೆಜಾನ್ ತನ್ನ ರಫ್ತು ವ್ಯವಹಾರದ ಬಗ್ಗೆಯೂ ತಿಳಿಸಿದ್ದು, 'ಭಾರತದಲ್ಲಿ ಸಣ್ಣ ನಗರಗಳು ಮತ್ತು ಪಟ್ಟಣಗಳಿಂದ ತಯಾರಿಸಿದ' ಉತ್ಪನ್ನಗಳನ್ನು ಪ್ರಪಂಚದಾದ್ಯಂತ ಮಾರಾಟ ಮಾಡಲು 70,000 ಕ್ಕೂ ಹೆಚ್ಚು ಭಾರತೀಯರ ವ್ಯವಹಾರಗಳಿಗೆ ಸಹಾಯ ಮಾಡಿದೆ ಎಂದು ಹೇಳಿದೆ.