ಪಣಜಿ, ಸೆ 27(DaijiworldNews/MS): ಗೋವಾದ ಮಾಜಿ ಮುಖ್ಯಮಂತ್ರಿ,ಕಾಂಗ್ರೆಸ್ ಹಿರಿಯ ಮುಖಂಡ ಲೂಯಿನ್ಹೊ ಫಲೈರೋ ಕಾಂಗ್ರೆಸ್ ಪಕ್ಷಕ್ಕೆ ಹಾಗೂ ಶಾಸಕ ಸ್ಥಾನಕ್ಕೆ ಸೆ. 27ರ ಸೋಮವಾರ ರಾಜೀನಾಮೆ ನೀಡಿದ್ದು, ಇದರ ಬೆನ್ನಲ್ಲೇ ಅವರು ತೃಣಮೂಲ ಕಾಂಗ್ರೆಸ್ಗೆ ಸೇರಬಹುದು ಎಂಬ ವದಂತಿಯನ್ನು ಹುಟ್ಟುಹಾಕಿದ್ದಾರೆ.
ಪಶ್ಚಿಮ ಬಂಗಾಳ ಮುಖ್ಯಮಂತ್ರಿ, ತೃಣಮೂಲ ಕಾಂಗ್ರೆಸ್ ವರಿಷ್ಠೆ ಮಮತಾ ಬ್ಯಾನರ್ಜಿಯನ್ನು ಹೊಗಳಿದ ಕೆಲವೇ ಹೊತ್ತಿನ ನಂತರ ರಾಜೀನಾಮೆ ನೀಡಿದ್ದಾರೆ. ನವೇಲಿಮ್ ಶಾಸಕರು ವಿಧಾನಸಭಾ ಸ್ಪೀಕರ್ ಗೆ ರಾಜೀನಾಮೆ ಸಲ್ಲಿಸಿದ್ದಾರೆ.
"ನಾನು ನವೇಲಿಮ್ನಿಂದ ನನ್ನ ಮತದಾರರೊಂದಿಗೆ ಸಂವಹನ ನಡೆಸಿದೆ. ಅವರು ನನ್ನ ಕುಟುಂಬ, ಮತ್ತು ಹೊಸ ಆರಂಭಕ್ಕಾಗಿ ಅವರ ಆಶೀರ್ವಾದ ಪಡೆಯುವುದು ನನಗೆ ಮುಖ್ಯವಾಗಿತ್ತು. ನನಗೆ ವಯಸ್ಸಾಗಿರಬಹುದು, ಆದರೆ ನವ ಹುಮ್ಮಸ್ಸು ನನ್ನಲ್ಲಿದೆ ಎಂದು ಹೇಳಿದ್ದಾರೆ.
ಮಮತಾ ಬ್ಯಾನರ್ಜಿ ನರೇಂದ್ರ ಮೋದಿ ಅವರಿಗೆ ತೀವ್ರ ಹೋರಾಟ ನೀಡಿದ್ದು, ಈ ಕಾರಣದಿಂದಾಗಿಯೇ ಪಶ್ಚಿಮಬಂಗಾಳದಲ್ಲಿ ಟಿಎಂಸಿ ಪಕ್ಷ ಗೆಲುವು ಸಾಧಿಸಿದೆ. ಭಾರತೀಯ ಜನತಾ ಪಕ್ಷವನ್ನು ಎದುರಿಸಲು ಕಾಂಗ್ರೆಸ್ ಗಿಂತ ಟಿಎಂಸಿ ದೊಡ್ಡ ಅಸ್ತ್ರವಾಗಬಹುದು. ಕಾಂಗ್ರೆಸ್ ಪಕ್ಷವನ್ನು ತೊರೆದಿರುವ ಫಲೈರೋ ಟಿಎಂಸಿ ಸೇರ್ಪಡೆ ಬಗ್ಗೆ ಈವರೆಗೂ ಅಧಿಕೃತವಾಗಿ ಏನನ್ನೂ ಘೋಷಿಸಿಲ್ಲ. ಆದರೆ ಅವರು ಟಿಎಂಸಿ ಸೇರ್ಪಡೆಯಾಗಬಹುದು ವದಂತಿ ದಟ್ಟವಾಗಿ ಹಬ್ಬಿದೆ.