ಬೆಂಗಳೂರು, ಸೆ 27(DaijiworldNews/MS): ತಾಲಿಬಾನಿಗಳು ಕಾಂಗ್ರೆಸ್ ನಲ್ಲಿದ್ದಾರೆ, ಕಾಂಗ್ರೆಸ್ ತಾಲಿಬಾನ್ ಪ್ರತಿರೂಪವಾಗಿದೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.
ಕಾಂಗ್ರೆಸ್ ಇಂದು ಪಾಕಿಸ್ತಾನಿ ಪಕ್ಷವಾಗಿ ಪರಿವರ್ತನೆ ಆಗಿದೆ. ಪಾಕಿಸ್ತಾನದ ಇಮ್ರಾನ್ ಖಾನ್ ಮಾತನಾಡಿದಂತೆ ಕಾಂಗ್ರೆಸ್ಸಿಗರು ಮಾತನಾಡ್ತಾರೆ. ಹಾಗಾಗಿ ಕಾಂಗ್ರೆಸ್ ನಲ್ಲಿರುವವರು ಛೋಟಾ ಇಮ್ರಾನ್ ಖಾನ್ ಗಳು ಎಂದು ಕುಟುಕಿದರು.
ವಿಪಕ್ಷ ನಾಯಕರಾದ ಸಿದ್ದರಾಮಯ್ಯನವರೇ ಟಿಪ್ಪು ಸುಲ್ತಾನ್ ವಂಶಸ್ಥರು. ಯಾಕೆಂದರೆ ಅವರಿಗೆ ಧರ್ಮ, ದೇಶ, ಸಂಸ್ಕೃತಿ ಬಗ್ಗೆ ಗೊತ್ತಿಲ್ಲ. ಕೇವಲ ಸ್ವಾರ್ಥಕ್ಕಾಗಿ, ಓಟ್ ಬ್ಯಾಂಕ್ ಗಾಗಿ ಅವಹೇಳನಕಾರಿಯಾಗಿ ಮಾತನಾಡುತ್ತಾರೆ. ಮಾಜಿ ಸಿಎಂ, ವಿರೋಧ ಪಕ್ಷದ ನಾಯಕರಾಗಿ ಗೌರವಯುತವಾಗಿ ಮಾತನಾಡಬೇಕು ಎಂಬುವುದು ತಿಳಿದಿಲ್ಲ.
ಕಾಂಗ್ರೆಸ್ ನಲ್ಲಿ ಒಂದಷ್ಟು ದೇಶ ಭಕ್ತರು ಮಾತನಾಡದೆ ಸುಮ್ಮನೆ ಕುಳಿತಿದ್ದಾರೆ. ದೇಶಕ್ಕೆ ಅನ್ಯಾಯ ಆದಾಗ ಮಾತನಾಡುವ ಧೈರ್ಯ ಇಲ್ಲದೆ ಗುಲಾಮಗಿರಿಯಲ್ಲಿ ಇದ್ದಾರೆ. ಸಿದ್ದರಾಮಯ್ಯ ಅವರು ನಾಲಿಗೆ ಬಿಗಿ ಹಿಡಿದು ಮಾತನಾಡಬೇಕು. ಬಿಜೆಪಿ ದೇಶಭಕ್ತರ ಪಕ್ಷವಾಗಿದೆ, ಎಲ್ಲರೂ ಶಾಂತಿ ನೆಮ್ಮದಿಯಿಂದ ಜೀವನ ಮಾಡಬೇಕು ಎಂಬುದು ಬಿಜೆಪಿ ಗುರಿಯಾಗಿದೆ ಎಂದರು.