ರಾಮನಗರ, ಸೆ 27(DaijiworldNews/MS): 'ಜನತಾದಳ ಪಕ್ಷದಿಂದ ಬೆಳೆದು ಹೋದವರೊಬ್ಬರು ನಮ್ಮ ಪಕ್ಷದ ಕುರಿತು ಕೇವಲವಾಗಿ ಮಾತನಾಡುತ್ತಿದ್ದಾರೆ. ಮಾತನಾಡೋರು ಮಾತನಾಡಲಿ 2023ರ ಚುನಾವಣೆಯಲ್ಲಿ ನಾವು ಏನು ಅನ್ನೋದನ್ನ ತೋರಿಸುತ್ತೇವೆ ' ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಸಿದ್ದರಾಮಯ್ಯ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದಾರೆ.
ರಾಮನಗರ ಜಿಲ್ಲೆ ಕೇತಗಾನಹಳ್ಳಿಯಲ್ಲಿ ನಡೆದ ಜೆಡಿಎಸ್ ನ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, " ನಮ್ಮ ಪಕ್ಷದಿಂದಲೇ ಬೆಳೆದು ಹೋದವರೊಬ್ಬರು ನಮ್ಮ ಪಕ್ಷದ ಕುರಿತು ಲಘುವಾಗಿ ಮಾತನಾಡುತ್ತಾರೆ. 2023ರ ಚುನಾವಣೆಯಲ್ಲಿ ನಮ್ಮ ಶಕ್ತಿ ತೋರಿಸುತ್ತೇವೆ. ರಾಜ್ಯದಲ್ಲಿ ಕನ್ನಡಿಗರಿಗೋಸ್ಕರ ಇರುವ ಪ್ರಾದೇಶಿಕ ಪಕ್ಷ ನಮ್ಮದು. ಬಡವರ ಹಲವು ಸಮಸ್ಯೆ ಮುಂದಿಟ್ಟುಕೊಂಡು ಹೊರಟಿದ್ದೇವೆ. 2023ರಿಂದ ಹೊಸ ಯುಗ ಆರಂಭವಾಗಲಿದೆ ಎಂದು ಹೇಳಿದರು.
ಇನ್ನು ಕಾರ್ಯಗಾರದ ಕುರಿತು ಮಾತನಾಡಿದ ಅವರು, ಮುಂದಿನ ದಿನಗಳಲ್ಲಿ ಅಭ್ಯರ್ಥಿಗಳು ಯಾವ ರೀತಿ ಜನರನ್ನು ತಲುಪಬೇಕು ಎಂಬುದು ನಾಯಕತ್ವ, ಶಿಸ್ತು ಬೆಳೆಸಲು ತರಬೇತಿ ನೀಡಲಾಗುತ್ತದೆ. ಅವರು ನಮ್ಮ ನಿರೀಕ್ಷೆಯಂತೆ ಕೆಲಸ ಮಾಡಬೇಕು. ಕಾರ್ಯದಕ್ಷತೆಯಿಂದ ಇರಬೇಕು. ಇಲ್ಲವಾದರೆ ನಾವು ಅಭ್ಯರ್ಥಿಗಳನ್ನು ಬದಲಾವಣೆ ಮಾಡುವ ಕೆಲಸವನ್ನೂ ಮಾಡುತ್ತೇವೆ ಎಂದು ಹೇಳಿದರು.