ಬೆಂಗಳೂರು, ಸೆ.27 (DaijiworldNews/HR): "ಜೆಡಿಎಸ್ ಪಕ್ಷವನ್ನು ಮುಗಿಸಲು ಸಿದ್ದರಾಮಯ್ಯ ಅವರಿಂದ ಮಾತ್ರವಲ್ಲ ಯಾರಿಂದಲೂ ಸಾಧ್ಯವಿಲ್ಲ" ಎಂದು ಮಾಜಿ ಪ್ರಧಾನಮಂತ್ರಿ ಹೆಚ್.ಡಿ.ದೇವೇಗೌಡರು ಹೇಳಿದ್ದಾರೆ.
ಈ ಕುರಿತು ಮಾತನಾಡಿದ ಅವರು, "ಅಪಪ್ರಚಾರ ಮಾಡುವುದಕ್ಕೂ ಒಂದು ಮಿತಿ ಇರಬೇಕು. ತಾವು ನಾಯಕರಾಗಿ ಬಂದಿದ್ದು ಎಲ್ಲಿಂದ, ಬೆಳೆದದ್ದು ಎಲ್ಲಿ? ಎಂಬುದನ್ನು ಅರಿತು ಮಾತನಾಡಬೇಕು. ಅವರ ಜತೆ ಇವರ ಜತೆ ಹೋಗುವ ಪಕ್ಷ ಎಂದು ದೂರುವ ಮುನ್ನ ಸಮ್ಮಿಶ್ರ ಸರಕಾರ ರಚನೆ ಮಾಡುವುದಕ್ಕೆ ಯಾರು ಯಾರ ಮನೆ ಬಾಗಿಲಿಗೆ ಬಂದರು ಎನ್ನುವುದು ನನಗೆ, ನಿಮಗೆ ಮಾತ್ರವಲ್ಲ ಇಡೀ ರಾಜ್ಯ, ದೇಶಕ್ಕೆ ಗೊತ್ತಿದೆ" ಎಂದರು.
ಇನ್ನು "ನಾನು ಅನೇಕ ಅಪಮಾನಗಳನ್ನು ಸಹಿಸಿದ್ದೇನೆ, ಎದುರಿಸಿದ್ದೇನೆ. ಅಪಾರ ಕಾರ್ಯಕರ್ತರ ಜತೆ ಅಂತ ಎಲ್ಲ ನೋವುಗಳನ್ನು ನುಂಗಿದ್ದೇನೆ. ನಮ್ಮನ್ನು ನೋಡಿ ಅಪಹಾಸ್ಯ ಮಾಡುವವರಿಗೆ 2023 ರಲ್ಲೀ ಉತ್ತರ ನೀಡೋಣ" ಎಂದಿದ್ದಾರೆ.
ಮಿಷನ್ 123 ಎಂಬ ಗುರಿಯೊಂದಿಗೆ ನಾವು ತಯಾರಿ ಆರಂಭ ಮಾಡಿದ್ದೇವೆ. ಈ ಗುರಿ ತಲುಪಲು ನಾವು ಎಲ್ಲಾ ಪ್ರಯತ್ನಗಳನ್ನು ಮಾಡುತ್ತೇವೆ. ಸಮರ್ಥರಾದ ಅಭ್ಯರ್ಥಿಗಳನ್ನು ಮಾತ್ರ ಕಣಕ್ಕೆ ಇಳಿಸುತ್ತೇವೆ. ನಮ್ಮನ್ನು ಹಗುರವಾಗಿ ಕಾಣುವ ಕೆಲವರಿಗೆ ತಕ್ಕ ಉತ್ತರ ನೀಡುತ್ತೇವೆ ಎಂದು ಹೇಳಿದ್ದಾರೆ.