ಜೈಪುರ, ಸೆ.27 (DaijiworldNews/PY): ರಾಜಸ್ತಾನದಲ್ಲಿ ಭಾನುವಾರ ಹೈಪ್ರೊಫೈಲ್ ಪ್ರವೇಶ ಪರೀಕ್ಷೆ ಎಂದೇ ಹೆಸರಾಗಿರುವ ಶಿಕ್ಷಕರ ನೇಮಕಾತಿ ಪ್ರವೇಶ ಪರೀಕ್ಷೆ ನಡೆಸಲಾಗಿದ್ದು, ಈ ವೇಳೆ ಚಪ್ಪಲಿಯಲ್ಲಿ ಬ್ಲೂಟೂತ್ ಡಿವೈಸ್ ಇಟ್ಟು ಕಾಪಿ ಹೊಡೆಯಲು ಯತ್ನಿಸಿದ್ದ ಐವರು ಅಭ್ಯರ್ಥಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಸಾಂದರ್ಭಿಕ ಚಿತ್ರ
ನಿನ್ನೆ ರಾಜಸ್ತಾನದಾದ್ಯಂತ ಅರ್ಹತಾ ಪರೀಕ್ಷೆಯನ್ನು ನಡೆಸಲಾಗಿತ್ತು. ಬಿಕನೇರ್ ಜಿಲ್ಲೆಯ ಗಂಗಾಶಹರ್ನಲ್ಲಿ ಮೂವರು ಅಭ್ಯರ್ಥಿಗಳು ಪರೀಕ್ಷೆಯಲ್ಲಿ ಕಾಪಿ ಹೊಡೆಯಲು ಸಿದ್ದತೆ ಮಾಡಿಕೊಳ್ಳುತ್ತಿದ್ದರು. ಚಪ್ಪಲಿಯಲ್ಲಿ ಬ್ಲೂಟೂತ್ ಡಿವೈಸ್ ಅನ್ನು ಅಳವಡಿಸಿಕೊಂಡು ಪರೀಕ್ಷೆ ಬರೆಯಲು ಬಂದಿದ್ದಾರೆ. ಇವರನ್ನು ಕಂಡು ಅನುಮಾನಗೊಂಡ ಸಿಬ್ಬಂದಿ ತಪಾಸಣೆ ನಡೆಸಿದ್ದಾರೆ.
ಮೂವರು ಅಭ್ಯರ್ಥಿಗಳನ್ನು ಪೊಲೀಸರು ತೀವ್ರ ತಪಾಸಣೆ ನಡೆಸಿದ್ದು, ಸಿಬ್ಬಂದಿಗಳಿಗೆ ಮತ್ತಷ್ಟು ಅನುಮಾನ ಹೆಚ್ಚಾಗಿದೆ. ಇವರ ಬಗ್ಗೆ ಅಲ್ಲೇ ಸ್ಥಳದಲ್ಲಿದ್ದ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತೀವ್ರ ತಪಾಸಣೆಯ ಬಳಿಕ ಚಪ್ಪಲಿಯಲ್ಲಿ ಬಚ್ಚಿಟ್ಟಿದ್ದ ಬ್ಲೂಟೂತ್ ಡಿವೈಸ್ ಪೊಲೀಸರಿಗೆ ಸಿಕ್ಕಿದೆ. ಈ ವೇಳೆ ಕೂಡಲೇ ಮೂವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದು, ಸತ್ಯ ಬಾಯ್ಬಿಟ್ಟಿದ್ದಾರೆ.
ಪೊಲೀಸರಿಗೆ, ಇದರ ಹಿಂದೆ ಜಾಲವೊಂದು ಸಕ್ರಿಯವಾಗಿರುವ ಅನುಮಾನ ವ್ಯಕ್ತವಾಗಿತ್ತು. ಈ ಜಾಲದ ಸದಸ್ಯರು ಬ್ಲೂಟೂತ್ ಚಪ್ಪಲಿಗಳನ್ನು ಅಭಿವೃದ್ಧಿಪಡಿಸಿ ಶಿಕ್ಷಕರ ಪ್ರವೇಶ ಪರೀಕ್ಷೆ ಅಭ್ಯರ್ಥಿಗಳಿಗೆ ಮಾರಾಟ ಮಾಡುತ್ತಿದ್ದು, ಒಂದು ಬ್ಲೂಟೂತ್ ಚಪ್ಪಲಿಗೆ 6 ಲಕ್ಷ ರೂ. ವಸೂಲಿ ಮಾಡುತ್ತಿದ್ದರು.
"ಬಂಧಿತರಿಂದ ಮೊಬೈಲ್, ಸಿಮ್ ಕಾರ್ಡ್, ಬ್ಲೂಟೂತ್ ಡಿವೈಸ್ ಸೇರಿ ಹಲವು ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಇವರ ವಿರುದ್ದ ಕಠಿಣ ಕ್ರಮ ಕೈಗೊಳ್ಳಲಾಗುವುದು" ಎಂದು ಬಿಕನೇರ್ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ ಪ್ರೀತಿ ಚಂದ್ರ ತಿಳಿಸಿದ್ದಾರೆ.