ಬೆಂಗಳೂರು, ಸೆ 27(DaijiworldNews/MS): "ಸ್ವಾತಂತ್ರ್ಯ ಹೋರಾಟ ಮಾಡಿದ್ದೇವೆ ಅನ್ನುತ್ತಾರೆ ಆದರೆ ಸ್ವಾತಂತ್ರ್ಯ ಬಂದಾಗ ಮೋದಿ ಹುಟ್ಟೇ ಇರಲಿಲ್ಲ, ಬರೀ ಡೋಂಗಿಗಳು ಎಂದು ಬಿಜೆಪಿ ಹಾಗೂ ಪ್ರಧಾನಿ ವಿರುದ್ದ ವ್ಯಂಗ್ಯವಾಡಿದ್ದ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ತಿರುಗೇಟು ನೀಡಿರುವ ಬಿಜೆಪಿ ರಾಜ್ಯ ಘಟಕ " ಕಾಂಗ್ರೆಸ್ ಹಂಗಾಮಿ ಅಧ್ಯಕ್ಷೆ ಸೋನಿಯ ಗಾಂಧಿ, ರಾಹುಲ್ ಗಾಂಧಿ ಹಾಗೂ ನೀವು ಯಾವ ಸ್ವಾತಂತ್ರ್ಯಕ್ಕೆ ಹೋರಾಡಿ ಯಾವ ಸೆರೆಮನೆಯಲ್ಲಿ, ಎಷ್ಟು ದಿನ ಬಂಧಿಯಾಗಿದ್ದಿರಿ? ಎಂದು ಪ್ರಶ್ನಿಸಿದೆ.
ಸರಣಿ ಟ್ವೀಟ್ ಮಾಡಿರುವ ಬಿಜೆಪಿ ರಾಜ್ಯ ಘಟಕ "ಕಾಂಗ್ರೆಸ್ ಹಂಗಾಮಿ ಅಧ್ಯಕ್ಷೆ ಸೋನಿಯ ಗಾಂಧಿ ಯಾವ ದೇಶದ ಸ್ವಾತಂತ್ರ್ಯಕ್ಕೆ ಹೋರಾಡಿದ್ದಾರೆ?ಕಾಂಗ್ರೆಸ್ ಪಕ್ಷದ ಶಾಶ್ವತ ಪ್ರಧಾನಿ ಅಭ್ಯರ್ಥಿ ರಾಹುಲ್ ಗಾಂಧಿ ಅವರು ಯಾವ ಸತ್ಯಾಗ್ರಹದಲ್ಲಿ ಭಾಗಿಯಾಗಿದ್ದರು?ನೀವು ಸ್ವಾತಂತ್ರ್ಯಕ್ಕೆ ಹೋರಾಡಿ ಯಾವ ಸೆರೆಮನೆಯಲ್ಲಿ, ಎಷ್ಟು ದಿನ ಬಂಧಿಯಾಗಿದ್ದಿರಿ? ಎಂದು ಕುಹಕವಾಡಿದೆ.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಕ್ಕಿ ಯೋಜನೆಯ ಪ್ರಸಹನ ಸದನದಲ್ಲಿ ಬಟಾಬಯಲಾಗಿದೆ. ಇಷ್ಟರ ಮೇಲೂ ನಾನು ಅಕ್ಕಿ ಕೊಟ್ಟೆ ಎಂದು ಹೋದಲ್ಲಿ ಬಂದಲ್ಲಿ ಬಡಾಯಿಸುವ ಸಿದ್ದರಾಮಯ್ಯ ಅವರನ್ನು ನೋಡಿದಾಗ ಮರುಕವಾಗುತ್ತದೆ.ಮಾನ್ಯ ಸಿದ್ದರಾಮಯ್ಯ ಅವರೇ, ನೀವು ಮುಖ್ಯಮಂತ್ರಿಯಾಗಿ ಮಾಡಿದ್ದೇನು?ಜನಮಾನಸದಲ್ಲಿ ಉಳಿಯುವ ಒಂದಾದರೂ ಸ್ಥಾಯಿ ಯೋಜನೆ ನೀಡಿದ್ದೀರಾ?ಅಕ್ಕಿ ಕೊಟ್ಟೆ , ಅಕ್ಕಿ ಕೊಟ್ಟೆ ಎಂದು ಇನ್ನೆಷ್ಟು ವರ್ಷ ಸುಳ್ಳಿನ ಗೋಪುರ ಕಟ್ಟುತ್ತೀರಿ?ಎಷ್ಟು ದಿನ ಸುಳ್ಳಿನ ಮೇಲೆ ಹೊರಳಾಡುತ್ತೀರಿ ಸಿದ್ದರಾಮಯ್ಯ?
ದೇಶದ 80 ಕೋಟಿಗೂ ಅಧಿಕ ಜನರ ಹಸಿವು ನೀಗಿಸುವುದಕ್ಕಾಗಿ ಮೋದಿ ಸರ್ಕಾರ 2.28 ಲಕ್ಷ ಕೋಟಿಗೂ ಅಧಿಕ ಮೊತ್ತದ ಆಹಾರ ಧಾನ್ಯ ವಿತರಿಸಿದೆ. ಜೀವನ ಪೂರ್ತಿ ನಾನು ಅಕ್ಕಿ ಕೊಟ್ಟೆ ಎಂದು ಸಿದ್ದರಾಮಯ್ಯ ಸುಳ್ಳಿನ ಮೆರವಣಿಗೆ ನಡೆಸುತ್ತಿದ್ದಾರೆ.ಅಕ್ಕಿಯ ನಾಟಕವನ್ನು ಯಾವಾಗ ಕೊನೆಗೊಳಿಸುತ್ತೀರಿ, ಇನ್ನೊಮ್ಮೆ ಸೋತ ಬಳಿಕವೋ? ಎಂದು ಬಿಜೆಪಿ ವ್ಯಂಗ್ಯವಾಡಿದೆ.