ಹುಬ್ಬಳಿ, ಸೆ.27 (DaijiworldNews/PY): "ಬಂದ್ ಮಾಡಿ ವಿದ್ಯಾರ್ಥಿಗಳಿಗೆ ಹಾಗೂ ಜನರಿಗೆ ತೊಂದರೆ ನೀಡಬೇಡಿ" ಎಂದು ಸಿಎಂ ಬಸವರಾಜ ಬೊಮ್ಮಾಯಿ ಮನವಿ ಮಾಡಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಜನರು ಈಗಷ್ಟೇ ಕೊರೊನಾದ ಹೊಡೆತದಿಂದ ಚೇತರಿಸಿಕೊಳ್ಳುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಭಾರತ್ ಬಂದ್ ಮಾಡಿ ಸಾರ್ವಜನಿಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ತೊಂದರೆ ಕೊಡಬೇಡಿ. ನಿಮ್ಮ ವೈಯುಕ್ತಿಕ ಹಿನ್ನೆಲೆಯಲ್ಲಿ ಹೋರಾಟ ನಡೆಸುವುದಾದರೆ ಮಾಡಿ" ಎಂದಿದ್ದಾರೆ.
ಕಾಂಗ್ರೆಸ್ ಬಗ್ಗೆ ಮಾತನಾಡಿದ ಅವರು, "ಕಾಂಗ್ರೆಸ್ ಗುಲಾಮಗಿರಿ ಪಕ್ಷ. ಬಿಜೆಪಿ ಒಂದು ದೇಶಭಕ್ತಿಯ ರಾಜಕೀಯ ಪಕ್ಷ. ಬಿಜೆಪಿಯ ಆಡಳಿತ ಕಂಡು ವಿಪಕ್ಷ ನಾಯಕ ಸಿದ್ದರಾಮಯ್ಯ ಹತಾಶರಾಗಿದ್ದಾರೆ" ಎಂದು ಹೇಳಿದ್ದಾರೆ.
"ಸಿದ್ದರಾಮಯ್ಯ ಓರ್ವ ಮಾಜಿ ಮುಖ್ಯಮಂತ್ರಿಯಷ್ಟೆ. ಅವರು ಹತಾಶರಾಗಿ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಈ ರೀತಿಯಾದ ಮಾತುಗಳು ಅವರಿಗೆ ಶೋಭೆ ತರುವುದಿಲ್ಲ" ಎಂದು ತಿಳಿಸಿದ್ದಾರೆ.
"ಎಲ್ಲಿಯವರೆಗೆ ಕಾಂಗ್ರೆಸ್ ಗುಲಾಮಗಿರಿಯಿಂದ ಹೊರಬರುವುದಿಲ್ಲವೋ ಅಲ್ಲಿಯವರೆಗೆ ಆ ಪಕ್ಷ ಉದ್ಧಾರವಾಗುವುದಿಲ್ಲ. ಎಲ್ಲದರಲ್ಲೂ ತಪ್ಪು ಹುಡುಕುವ ಪ್ರವೃತ್ತಿ ಬೆಳೆಸಿಕೊಂಡಿದ್ದಾರೆ" ಎಂದಿದ್ದಾರೆ.