ಗಾಜಿಯಾಬಾದ್, ಸೆ.27 (DaijiworldNews/HR): ಸಿಯಾಚಿನ್ ಬೆಟ್ಟದ ಮೇಲೆ 2005ರಲ್ಲಿ ತ್ರಿವರ್ಣ ಹಾರಿಸಲು ಹೋದ ಸಂದರ್ಭದಲ್ಲಿ ನಡೆದ ಹಿಮಪಾತದಿಂದ ಮೃತಪಟ್ಟ ಗಾಜಿಯಾಬಾದ್ನ ಮುರಾದನಗರ ಪ್ರದೇಶದ ಹಿಸಾಲಿ ಗ್ರಾಮದ ಯೋಧ ಅಮರೀಶ್ ತ್ಯಾಗಿ ಅವರ ಶವ 16 ವರ್ಷಗಳ ಬಳಿಕ ಇದೀಗ ಪತ್ತೆಯಾಗಿದೆ ಎಂದು ತಿಳಿದು ಬಂದಿದೆ.
ಅಮರೀಶ್ ಅವರು ಪರ್ವತಾರೋಹಿ ಕೂಡ ಆಗಿದ್ದು, ಕಾರ್ಗಿಲ್ ಯುದ್ಧದಲ್ಲಿಯೂ ಹೋರಾಡಿದ ಯೋಧ. ತಮ್ಮ ತಂಡದೊಂದಿಗೆ ಧ್ವಜ ಹಾರಿಸಲು ಸಿಯಾಚಿನ್ನ ಮೇಲ್ಭಾಗಕ್ಕೆ ಹೋಗಿದ್ದು, ಹಿಂದಿರುಗಿ ಬರುವಾಗ ಹಿಮಪಾತದಿಂದಾಗಿ ಕೆಲವು ಯೋಧರು ಹಿಮದಲ್ಲಿ ಹೂತೇ ಹೋಗಿದ್ದು, ಈ ಸಂದರ್ಭದಲ್ಲಿ ನಡೆದ ಶೋಧ ಕಾರ್ಯದಲ್ಲಿ ಮೂವರು ಸೈನಿಕರ ಮೃತದೇಹ ಮಾತ್ರ ಸಿಕ್ಕಿತ್ತು. ಆದರೆ ಅಮರೀಶರ್ ಸೇರಿದಂತೆ ಕೆಲವು ಯೋಧರ ದೇಹ ಸಿಕ್ಕಿರಲಿಲ್ಲ. ಇದರಿಂದ ತಮ್ಮ ಮಗ ಬದುಕಿದ್ದಾನೆ ಎಂದೇ ಅವರ ಅಪ್ಪ-ಅಮ್ಮ ನಿರೀಕ್ಷೆಯಿಂದ ಕಾಯುತ್ತಿದ್ದರು.
ಇದೀಗ 16 ವರ್ಷಗಳ ಬಳಿಕ ಸೇನೆಯು ಅಮರೀಶ್ ಮೃತದೇಹವನ್ನು ಪತ್ತೆ ಹಚ್ಚಿದ್ದು, ಅವರ ಸ್ವಗ್ರಾಮಕ್ಕೆ ಮಂಗಳವಾರ ತಲುಪಲಿದೆ. ಅಪ್ಪ- ಅಮ್ಮನಂತೆಯೇ ಕುಟುಂಬಸ್ಥರು ಹಾಗೂ ಅವರ ಸ್ನೇಹಿತರು ಕೂಡ ಅಮರೀಶ್ ಬದುಕುಳಿದಿರುವ ಆಸೆ ಇಟ್ಟುಕೊಂಡಿದ್ದರು ಎನ್ನಲಾಗಿದೆ.
ಇನ್ನು ಮಗನ ಬರುವಿಕೆಯನ್ನೇ ಕಾಯುತ್ತಿದ್ದ ಅಮರೀಶ್ ಅವರ ಅಪ್ಪ-ಅಮ್ಮ ಮಾತ್ರ ಮಗನಿಗಾಗಿ ಕಾದು ಇಹಲೋಕ ತ್ಯಜಿಸಿದ್ದಾರೆ.