ಬೆಂಗಳೂರು, ಸೆ.26 (DaijiworldNews/HR): ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಮೂರು ಕೃಷಿ ಕಾಯ್ದೆಯನ್ನು ವಿರೋಧಿಸಿ ರೈತ ಸಂಘಟನೆಗಳು ಕರೆ ಸೋಮವಾರದಂದು ನೀಡಿರುವ ಭಾರತ್ ಬಂದ್ ಪ್ರತಿಭಟನೆಗೆ ಕಾಂಗ್ರೆಸ್ ಹಾಗೂ ಜೆಡಿಎಸ್ ಬೆಂಬಲ ಘೋಷಿಸಿವೆ.
ಈ ಕುರಿತು ಮಾತನಾಡಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ರೈತರು ನಡೆಸುತ್ತಿರುವ ಭಾರತ್ ಬಂದ್ಗೆ ಕಾಂಗ್ರೆಸ್ ಬೆಂಬಲ ಸೂಚಿಸುತ್ತದೆ. ಕೇಂದ್ರ ಸರ್ಕಾರ ಜಾರಿ ಮಾಡಿರುವ ಮೂರು ಕೃಷಿ ಕಾಯ್ದೆ ವಿರುದ್ಧ ಅನ್ನದಾತರು ಬೀದಿಗಿಳಿದು ಹೋರಾಡುತ್ತಿದ್ದಾರೆ. ಕಳೆದ ಒಂದು ವರ್ಷದಿಂದ ನಮಗೆ ಬದುಕಲು ಬಿಡಿ ಎಂದು ಕಣ್ಣೀರಿಡುತ್ತಾ ರೈತರು ಪ್ರತಿಭಟನೆಗಳನ್ನು ನಡೆಸುತ್ತಿದ್ದು, ನಾಳೆ ನಡೆಸುತ್ತಿರುವ ಭಾರತ್ ಬಂದ್ ಗೆ ನಮ್ಮ ಬೆಂಬಲವಿದೆ" ಎಂದರು.
ಇನ್ನು ಜೆಡಿಎಸ್ ಕೂಡ ಭಾರತ್ ಬಂದ್ಗೆ ಬೆಂಬಲಿಸಿದ್ದು, ರೈತರ ಹಿತದೃಷ್ಟಿಯಿಂದ ನಡೆಸುವ ಯಾವುದೇ ಹೋರಾಟಕ್ಕೂ ನಮ್ಮ ಬೆಂಬಲವಿರಲಿದೆ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.