ಬೆಳಗಾವಿ, ಸೆ.26 (DaijiworldNews/PY): "ಬೆಳಗಾವಿ-ಬೆಂಗಳೂರು ಮಧ್ಯೆ ಓಡಾಡುವ ರೈಲಿಗೆ ಸುರೇಶ್ ಅಂಗಡಿ ಅವರ ಹೆಸರು ಇಡಲು ಶಿಫಾರಸ್ಸು ಮಾಡುತ್ತೇನೆ" ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಸಾಂವಗಾಂವ ರಸ್ತೆಯ ಸುರೇಶ್ ಅಂಗಡಿ ಶಿಕ್ಷಣ ಪ್ರತಿಷ್ಠಾನದ ಆವರಣದಲ್ಲಿ ದಿ. ಸುರೇಶ್ ಅಂಗಡಿ ಪುತ್ಥಳಿಯನ್ನು ಅನಾವರಣಗೊಳಿಸಿ ಮಾತನಾಡಿದ ಅವರು, "ಬೆಳಗಾವಿ ಸೇರಿದಂತೆ ಹುಬ್ಬಳ್ಳಿ-ಧಾರವಾಡ ನಗರಗಳ ಅಭಿವೃದ್ಧಿಗಾಗಿ ಧಾರವಾಡ-ಬೆಳಗಾವಿ ನೇರ ರೈಲು ಮಾರ್ಗಕ್ಕೆ ಸರ್ಕಾರದಿಂದ ಸಂಪೂರ್ಣ ಸಹಕಾರ ನೀಡುತ್ತೇವೆ" ಎಂದಿದ್ದಾರೆ.
"ಸುರೇಶ್ ಅಂಗಡಿ ಅವರಿಗೆ ಹಿಂದುತ್ವದ ಬಗ್ಗೆ ಅಭಿಮಾನವಿತ್ತು. ಸುರೇಶ್ ಅಂಗಡಿ ಅವರಿಗೆ ಅಧಿಕಾರ ನೀಡಿದ ಕೆಲವೇ ದಿನಗಳ್ಲಲಿ ರೈಲ್ವೆ ಸುಧಾರಿಸಿದರು. ಅಲ್ಲದೇ, ರೈಲ್ವೆ ಬೋರ್ಡ್ ಮೇಲೆಯೂ ಪ್ರಭಾವ ಬೀರಿದ್ದರು" ಎಂದು ತಿಳಿಸಿದ್ದಾರೆ.
"ಬೆಂಗಳೂರು-ಬೆಳಗಾವಿ ರೈಲಿಗೆ ಸುರೇಶ್ ಅಂಗಡಿ ಎಕ್ಸ್ಪ್ರೆಸ್ ಎಂದು ನಾಮಕರಣ ಮಾಡುವಂತೆ ಕೇಂದ್ರಕ್ಕೆ ಶಿಫಾರಸ್ಸು ಮಾಡಲಾಗುವುದು" ಎಂದಿದ್ದಾರೆ.
"ಸುರೇಶ್ ಅಂಗಡಿ ಅವರಿಗೆ ಉತ್ತರ ಕರ್ನಾಟಕದ ಮೇಲೆ ಬಹಳ ಅಭಿಮಾನ ಇತ್ತು. ಈ ಹಿಂದೆ ಧಾರವಾಡ-ಬೆಳಗಾವಿ ರೈಲ್ವೆ ಯೋಜನೆಗೆ ಸಹಕಾರ ಕೊಡುತ್ತೇವೆ ಎಂದು ಹೇಳಿದ್ದರು. ಆದರೆ, ಸುರೇಶ್ ಅಂಗಡಿ ಅವರು ಪ್ರೀತಿ ಕೊಟ್ಟು ಹೋಗಿದ್ದಾರೆ. ಅದನ್ನು ನಾವು ಉಳಿಸಿಕೊಳ್ಳಬೇಕು" ಎಂದು ತಿಳಿಸಿದ್ದಾರೆ.