ಬೆಂಗಳೂರು, ಸೆ.26 (DaijiworldNews/PY): "ಸಂವಿಧಾನದ ಮೇಲೆ ಗೌರವವಿಲ್ಲದ ಮನುವಾದಿ ಬಿಜೆಪಿ ದಲಿತ ವಿರೋಧಿ ವಾತಾವರಣ ಸ್ಥಾಪಿಸುತ್ತಿರುವ ಕಾರಣ ರಾಜ್ಯದಲ್ಲಿ ಮತ್ತೆ ದಲಿತರ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿವೆ" ಎಂದು ರಾಜ್ಯ ಕಾಂಗ್ರೆಸ್ ಆರೋಪಿಸಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಕಾಂಗ್ರೆಸ್, "ಸ್ವತಂತ್ರಾನಂತರ ನಮ್ಮ ದೇಶದ ಸಂವಿಧಾನದ ನೆರವಿನಿಂದ ತುಳಿತಕ್ಕೊಳಪಟ್ಟವರು ಸ್ವಾಭಿಮಾನದಿಂದ ಬದುಕುವ ನಿಟ್ಟಿನಲ್ಲಿ ಸಾಕಷ್ಟು ಶ್ರಮವಹಿಸಿತ್ತು ಕಾಂಗ್ರೆಸ್. ಆದರೆ ಸಂವಿಧಾನದ ಮೇಲೆ ಗೌರವವಿಲ್ಲದ ಮನುವಾದಿ ಬಿಜೆಪಿ ದಲಿತ ವಿರೋಧಿ ವಾತಾವರಣ ಸ್ಥಾಪಿಸುತ್ತಿರುವ ಕಾರಣ ರಾಜ್ಯದಲ್ಲಿ ಮತ್ತೆ ದಲಿತರ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿವೆ" ಎಂದು ಕಿಡಿಕಾರಿದೆ.
"ಇತ್ತೀಚೆಗಷ್ಟೇ ದಲಿತ ಮಗು ದೇಗುಲ ಪ್ರವೇಶಿಸಿದ್ದಕ್ಕೆ ದಂಡ ಹಾಕಿದ ಪ್ರಕರಣ ಮಾಸುವ ಮುನ್ನವೇ ಕೊಪ್ಪಳದಲ್ಲೂ ಅದೇ ಮಾದರಿಯ ದೌರ್ಜನ್ಯ ವರದಿಯಾಗಿದೆ. ಬಿಜೆಪಿ ಆಡಳಿತಕ್ಕೆ ಬಂದಮೇಲೆ ಸಮಾಜದಲ್ಲಿ ಈ ರೀತಿಯ ಪ್ರಕರಣಗಳು ಹೆಚ್ಚಲು ದಲಿತವಿರೋಧಿಬಿಜೆಪಿ ಕಾರಣ. ವಾಸ್ತವದಲ್ಲಿ ಹಿಂದುಗಳು ಅಪಾಯದಲ್ಲಿರುವುದು ಬಿಜೆಪಿ ಆಡಳಿತದಲ್ಲಿಯೇ" ಎಂದು ದೂರಿದೆ.
"ಹಿಂದಿನಂತೆಯೇ ಈಗಲೂ ವಿಶ್ವಸಂಸ್ಥೆಯ ತಮ್ಮ ಭಾಷಣದಲ್ಲಿ ಪಾಕಿಸ್ತಾನ, ಚೀನಾದ ಹೆಸರು ಹೇಳಲು 56 ಇಂಚಿನ ಎದೆಯವರು ಭಯಪಟ್ಟಿದ್ದಾರೆ. ಪಾಕ್ನ ಭಯೋತ್ಪಾದನೆಗೆ ಕುಮ್ಮಕ್ಕು ಹಾಗೂ ಚೀನಾದ ಅತಿಕ್ರಮಣವನ್ನು ಜಾಗತಿಕ ವೇದಿಕೆಯಲ್ಲಿ ನೇರವಾಗಿ ಪ್ರಸ್ತಾಪಿಸಲು ಹಿಂಜರಿದಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪಾಕ್, ಚೀನಾದ ಹೆಸರು ಹೇಳಲು ಏಕೆ ಅಷ್ಟು ಭಯ?!" ಎಂದು ಪ್ರಶ್ನಿಸಿದೆ.