ಬೆಂಗಳೂರು, ಸೆ.26 (DaijiworldNews/PY): "ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ ಅವರು ಒಳ್ಳೆಯ ಕೆಲಸಗಳನ್ನು ಮಾಡುತ್ತಿದ್ದರೆ ಅವರನ್ನು ಸಿಎಂ ಸ್ಥಾನದಿಂದ ಕೆಳಗೆ ಇಳಿಸುತ್ತಿರಲಿಲ್ಲ" ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ತಿಳಿಸಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, "ಬಿ ಎಸ್ ಯಡಿಯೂರಪ್ಪ ಅವರು ಸರಿಯಾಗಿ ಕೆಲಸ ಮಾಡದ ಕಾರಣ ಅವರನ್ನು ಸಿಎಂ ಸ್ಥಾನದಿಂದ ಇಳಿಸಿದರು. ಓರ್ವ ಮಂತ್ರಿ ನಾನು ಪರೀಕ್ಷೆ ಬರೆದಿದ್ದೇನೆ ಫಲಿತಾಂಶ ಬರಬೇಕು ಎನ್ನುತ್ತಿದ್ದ. ಏನಾಯ್ತಪ್ಪ ರಿಸಲ್ಟ್? ನೀನು ಮಾಜಿ ಆದೆ" ಎಂದು ಸಿ ಪಿ ಯೋಗೇಶ್ವರ್ ಹೆಸರು ಹೇಳದೆ ವಾಗ್ದಾಳಿ ನಡೆಸಿದ್ದಾರೆ.
ಬೆಂಗಳೂರಿನ ಹೆಬ್ಬಾಳ ಹಾಗೂ ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದಲ್ಲಿ ಆಪರೇಷನ್ ಜೆಡಿಎಸ್ ಮಾಡಲಾಗಿದ್ದು, ಎರಡು ಕ್ಷೇತ್ರದ ಜೆಡಿಎಸ್ ಪ್ರಮುಖ ನಾಯಕರು ಕಾಂಗ್ರೆಸ್ಗೆ ಸೇರ್ಪಡೆಗೊಂಡಿದ್ದಾರೆ. 2013 ಹಾಗೂ 2018ರ ಜೆಡಿಎಸ್ ವಿಧಾನಸಭೆ ಚುನಾವಣೆ ಅಭ್ಯರ್ಥಿಗಳಾದ ಹನುಮಂತೇಗೌಡ, ಟಿ ಜಿ ಚಂದ್ರು, ಮಾಜಿ ಉಪ ಮಹಾಪೌರ ಎಂ ಆನಂದ್, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಹಾಗೂ ಅನೇಕ ಮುಖಂಡರು, ಕಾರ್ಯಕರ್ತರು ಕಾಂಗ್ರೆಸ್ಗೆ ಸೇರ್ಪಡೆಯಾಗಿದ್ದಾರೆ.