ಬೆಂಗಳೂರು, ಸೆ.26 (DaijiworldNews/PY): "ರಾಜಕಾರಣಿಗಳಿಗೆ ಹೃದಯ ವೈಶಾಲ್ಯತೆ ಇರಬೇಕು. ಬಡ ಜನತೆಯ ಕಷ್ಟಕ್ಕೆ ಮಿಡಿಯುವ ಮನಸ್ಸಿರಬೇಕು. ಆದರೆ, ಜೆಡಿಎಸ್ ಹಾಗೂ ಬಿಜೆಪಿ ನಾಯಕರು ಸ್ವಾರ್ಥ ಸಾಧಕರು" ಎಂದು ವಿಪಕ್ಷ ನಾಯ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಾಜಿ ಸಿಎಂ ದಿ. ಆರ್.ಗುಂಡೂರಾವ್ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, "ಗುಂಡೂರಾವ್ ಅವರು ಬಡವರ ಕಷ್ಟಕ್ಕೆ ಸ್ಪಂದಿಸುವ ವ್ಯಕ್ತಿಯಾಗಿದ್ದರು. ನನ್ನ ಅಧಿಕಾರದ ಸಮಯದಲ್ಲಿ ಅನ್ನಭಾಗ್ಯ ಯೋಜನೆ ಜಾರಿಗೆ ತಂದಿದ್ದೆವು. ಆದರೆ, ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಸುಳ್ಳು ಹೇಳಿಕೆಗಳನ್ನೇ ನೀಡುತ್ತಿದ್ದಾರೆ" ಎಂದು ಕಿಡಿಕಾರಿದ್ದಾರೆ.
"ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬಂದಲ್ಲಿ 10 ಕೆ ಜಿ ಅಕ್ಕಿ ನೀಡಲು ನಾವು ಸಿದ್ಧರಿದ್ದೇವೆ. ನಾನು ಸಿಎಂ ಆಗಿದ್ದ ಸಂದರ್ಭ ಬಿಪಿಎಲ್ ಕುಟುಂಬಗಳಿಗೆ 5 ಕೆ ಜಿ ಅಕ್ಕಿ ನೀಡುತ್ತಿದ್ದೆವು. ಬಳಿಕ 5 ಕೆ ಜಿಯಿಂದ 7ಕೆ ಜಿ ಹೆಚ್ಚು ಮಾಡಿದ್ದೆವು. ಆದರೆ, ಮೈತ್ರಿ ಸರ್ಕಾರದಲ್ಲಿ ಏಳು ಕೆ ಜಿ ಅಕ್ಕಿ ನೀಡಲು ಹಣ ಇಟ್ಟಿರಲಿಲ್ಲ ಎಂದು ಹೆಚ್ ಡಿ ಕುಮಾರಸ್ವಾಮಿ ಅವರು ಆರೋಪ ಮಾಡುತ್ತಿದ್ದಾರೆ" ಎಂದಿದ್ದಾರೆ.
"ಬಸವರಾಜ ಬೊಮ್ಮಾಯಿ ಅವರನ್ನು ಸಿಎಂ ಮಾಡಿರುವುದು ಆರ್ಎಸ್ಎಸ್ನವರು. ಆರ್ಎಸ್ಎಸ್ನವರು ದೇಶಭಕ್ತರಲ್ಲ. ಬಿಜೆಪಿಯ ಯಾರೊಬ್ಬರೂ ಕೂಡಾ ದೇಶಕ್ಕಾಗಿ ಸತ್ತಿಲ್ಲ. ಬಿಜೆಪಿಗರು ಬಡವರು ಹಾಗೂ ದಲಿತ ವಿರೋಧಿಗಳು. ಇವರಿಗೆ ನ್ಯಾಯ ಕೊಡಿಸಬೇಕು ಎಂದರೆ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರಬೇಕು. ಬಿಜೆಪಿಯವರೇ ತಾಲಿಬಾನಿಗಳು. ಹಾಗಾಗಿ ಜನರು ಹುಷಾರಾಗಿರಬೇಕು" ಎಂದು ಹೇಳಿದ್ದಾರೆ.