ಬೆಂಗಳೂರು, ಸೆ.26 (DaijiworldNews/HR): ಮನೆ ಮುಂದೆ ನಿಲ್ಲಿಸಿದ್ದ 17ಕ್ಕೂ ಅಧಿಕ ಕಾರುಗಳ ಗಾಜನ್ನು ಒಡೆದು ದುಷ್ಕರ್ಮಿಗಳು ಪುಂಡಾಟ ಮೆರೆದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ 5 ಜನ ಇಂಜಿನಿಯರಿಂಗ್ ವಿದ್ಯಾರ್ಥಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಸಾಂದರ್ಭಿಕ ಚಿತ್ರ
ಬಂಧಿತರನ್ನು ರೋಹಿನ್ ಸೈನಿ, ಸಕ್ಕಂ ಭಾರದ್ವಾಜ್, ಮಾಯಾಂ ವೈ ಆರ್, ಅದ್ನಾನ್ ಪಹಾದ್, ಜಯಸ್ ಎಂದು ಗುರುತಿಸಲಾಗಿದೆ.
ಆರ್.ಆರ್. ನಗರ ಹಾಗೂ ಕೆಂಗೇರಿಗಳಲ್ಲಿ ಮಧ್ಯ ರಾತ್ರಿ 2 ಗಂಟೆ ಸುಮಾರಿಗೆ ಬೈಕ್ ನಲ್ಲಿ ಬಂದ ಕಿಡಿಗೇಡಿಗಳು ಮನೆಗಳ ಮುಂದೆ ನಿಲ್ಲಿಸಿದ್ದ ಕಾರಿನ ಗಾಜುಗಳನ್ನು ದೊಣ್ಣೆಯಿಂದ ಒಡೆದು ಪುಡಿ ಪುಡಿ ಮಾಡಿ ತೆರಳಿದ್ದರು. ಈ ದೃಶ್ಯ ಸಿಸಿ ಟಿವಿ ಕ್ಯಾಮರಾದಲ್ಲಿ ಸೆರೆಯಾಗಿತ್ತು. ಪ್ರಕರಣ ದಾಖಲಿಸಿಕೊಂಡಿದ್ದ ಆರ್.ಆರ್. ನಗರ ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದರು.
ಇನ್ನು ಈ ಐವರೂ ಕೂಡ ಅಂತರಾಜ್ಯದವರಾಗಿದ್ದಾರೆ. ವಿದ್ಯಾರ್ಥಿಗಳು ಕಂಠಪೂರ್ತಿ ಕುಡಿದಿದ್ದು, ಕುಡಿದ ಅಮಲಿನಲ್ಲಿ ಬೈಕ್ ನಲ್ಲಿ ತೆರಳಿ ಕಾರಿನ ಗಾಜುಗಳನ್ನು ಒಡೆದು ಪುಂಡಾಟ ಮೆರೆದಿದ್ದರು.