ನವದೆಹಲಿ, ಸೆ.26 (DaijiworldNews/PY): "ಕೊರೊನಾವು ಜನರು ಆರೋಗ್ಯದ ಬಗ್ಗೆ ಕಾಳಜಿ ಹಾಗೂ ನೈಸರ್ಗಿಕ ಉತ್ಪನ್ನಗಳ ಕುರಿತು ಗಮನಹರಿಸುವಂತೆ ಮಾಡಿದೆ" ಎಂದು ಪ್ರಧಾನಿ ನರೆಂದ್ರ ಮೋದಿ ತಿಳಿಸಿದ್ದಾರೆ.
ಮನ್ ಕೀ ಬಾತ್ನ 81ನೇ ಕಂತಿನಲ್ಲಿ ಮಾತನಾಡಿದ ಅವರು, "ಎಲ್ಲರೂ ವರ್ಷಕ್ಕೆ ಒಮ್ಮೆಯಾದರೂ ನದಿಗಳ ದಿನ ಆಚರಿಸಬೇಕು" ಎಂದಿದ್ದಾರೆ.
"ಇಂದು ವಿಶ್ವ ನದಿ ದಿನವಾಗಿದ್ದು, ಎಲ್ಲರ ಸಹಕಾರದೊಂದಿಗೆ ನೀರಿನ ಮಾಲಿನ್ಯವನ್ನು ತಡೆಗಟ್ಟಬೇಕಿದೆ. ಸ್ಥಳೀಯರು ತಮಿಳುನಾಡಿನ ನಾಗಾ ನದಿಯನ್ನು ಪುನರುಜ್ಜೀವನಗೊಳಿಸಿದ್ದಾರೆ. ನದಿಗಳನ್ನು ಪುನಶ್ಚೇತನಗೊಳಿಸಲು ಸಾಕಷ್ಟು ಕೆಲಸಗಳನ್ನು ಮಾಡಲಾಗುತ್ತಿದೆ" ಎಂದು ತಿಳಿಸಿದ್ದಾರೆ.
"ಮಹಾತ್ಮ ಗಾಂಧಿಯವರು ಸ್ವಚ್ಛತಾ ಆಭಿಯಾನವನ್ನು ಪ್ರಾರಂಭಿಸಿದ್ದರು. ನಾವು ಆರ್ಥಿಕ ಸ್ವಚ್ಛತೆಯ ಬಗ್ಗೆಯೂ ಗಮನಹರಿಸಬೇಕು" ಎಂದಿದ್ದಾರೆ.
ಈ ಸಂದರ್ಭ ಪ್ರಧಾನಿ ಮೋದಿ ಅವರು, ಜಾರ್ಖಂಡ್ನಲ್ಲಿ ಮಹಿಳೆಯರು ನಡೆಸುತ್ತಿರುವ ಅಲೋವೆರಾ ಕೃಷಿ ಕುರಿತು ಹಾಗೂ ಅವರ ಬಳಿಯಿಂದ ಸ್ಯಾನಿಟೈಸರ್ ಕಂಪೆನಿಗಳನ್ನು ಖರೀದಿ ಮಾಡುವುದರ ಕುರಿತು ಉಲ್ಲೇಖಿಸಿದ್ದಾರೆ.
"ಬೇವು ಹಾಗೂ ಅಲೋವೆರಾದಂತ ಗಿಡಮೂಲಿಕೆ ಹಾಗೂ ಔಷಧೀಯ ಸಸ್ಯಗಳ ಕುರಿತು ಪ್ರಾಮುಖ್ಯತೆ ನೀಡುವ ಕೆಲಸವನ್ನು ಆಯುಷ್ ಸಚಿವಾಲಯ ಮಾಡುತ್ತಿದೆ" ಎಂದಿದ್ದಾರೆ.