ನವದೆಹಲಿ, ಸೆ.26 (DaijiworldNews/PY): ಪ್ರಧಾನಿ ನರೇಂದ್ರ ಮೋದಿ ಅವರ ಭೇಟಿಯ ಸಂದರ್ಭ ಅಮೇರಿಕಾವು ಕಂಚಿನ ನಟರಾಜ ವಿಗ್ರಹ ಸೇರಿದಂತೆ 157 ಕಲಾಕೃತಿಗಳು ಹಾಗೂ ಪುರಾತನ ವಸ್ತುಗಳನ್ನು ಭಾರತಕ್ಕೆ ಹಸ್ತಾಂತರಿಸಿದೆ.
ಕಳ್ಳತನ, ಅಕ್ರಮ ವ್ಯಾಪಾರ ಹಾಗೂ ಸಾಂಸ್ಕೃತಿಕ ವಸ್ತುಗಳ ಕಳ್ಳಸಾಗಣೆ ವಿರುದ್ದ ಹೋರಾಡುವ ನಿಟ್ಟಿನಲ್ಲಿ ಬದ್ಧರಾಗಿರುವುದಾಗಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮೇರಿಕಾ ಅಧ್ಯಕ್ಷ ಜೋ ಬಿಡೆನ್ ತಿಳಿಸಿದ್ದರು. ಇದರ ಬೆನ್ನಲ್ಲೇ ಪ್ರಧಾನಿ ನರೇಂದರ ಮೋದಿ ಅವರಿಗೆ ಅಮೇರಿಕಾ ವಿಶೇಷ ಉಡುಗೊರೆಗಳನ್ನು ಹಸ್ತಾಂತರಿದ್ದಾರೆ.
ಪುರಾತನ ವಸ್ತುಗಳನ್ನು ಪ್ರಧಾನಿ ನರೇಂದ್ರ ಮೋದಿ ಅವರು ಭಾರತಕ್ಕೆ ವಾಪಾಸ್ ಒಯ್ಯಲು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
10ನೇ ಶತಮಾನದ ರೇವಾಂತ ಕಲ್ಲಿನ ವಿಗ್ರಹ, 12ನೇ ಶತಮಾನದ ತಾಮ್ರದ ನಟರಾಜನ ವಿಗ್ರಹ, 11 ಹಾಗೂ 14ನೇ ಶತಮಾನದ ಪುರಾತತ್ವ ವಸ್ತುಗಳು ಕಲಾಕೃತಿಗಳು, ಟೆರಾಕೋಟಾ ಹೂದಾನಿ ಜೊತೆಗೆ 45 ಪ್ರಾಚೀನ ವಸ್ತುಗಳನ್ನು ಭಾರತಕ್ಕೆ ಹಸ್ತಾಂತರಿಸಿದೆ.
ಈ ವಸ್ತುಗಳು 11 ನೇ ಶತಮಾನದಿಂದ 14 ನೇ ಶತಮಾನದ ಅವಧಿಗೆ ಸೇರಿವೆ. 157 ಕಲಾಕೃತಿಗಳಲ್ಲಿ ಅರ್ಧದಷ್ಟು ಕಲಾಕೃತಿಗಳು (71) ಸಾಂಸ್ಕೃತಿಕವಾದರೆ, ಉಳಿದ ಅರ್ಧವು ಹಿಂದೂ ಧರ್ಮ (60), ಬೌದ್ಧ ಧರ್ಮ (16) ಮತ್ತು ಜೈನ ಧರ್ಮ (9) ಕ್ಕೆ ಸಂಬಂಧಿಸಿದ ಪ್ರತಿಮೆಗಳನ್ನು ಒಳಗೊಂಡಿದೆ.
ಕಂಚಿನ ವಿಗೃಹಗಳಾದ ಲಕ್ಷ್ಮಿ ನಾರಾಯಣ, ಬುದ್ಧ, ವಿಷ್ಣು, ಶಿವ ಪಾರ್ವತಿ ಹಾಗೂ 24 ಜೈನ ತೀರ್ಥಂಕರರು, ಕಂಕಲಮೂರ್ತಿ, ಬ್ರಾಹ್ಮಿಯಾ ಹಾಗೂ ನಂದಿಕೇಶನ ಪ್ರಸಿದ್ಧ ಭಂಗಿಗಳ ಅಲಂಕೃತ ಪ್ರತಿಮೆಗಳಿವೆ. ಲೋಹ, ಕಲ್ಲು ಹಾಗೂ ಟೆರಾಕೋಟಾ ಕಲಾಕೃತಿಗಳು ಸೇರಿದಂತೆ ಪುರಾತನ ವಸ್ತುಗಳನ್ನು ಅಮೇರಿಕಾ ಭಾರತಕ್ಕೆ ಹಸ್ತಾಂತರಿಸುತ್ತಿದೆ.
ಹಿಂದೂಧರ್ಮದ ಧಾರ್ಮಿಕ ಶಿಲ್ಪಗಳು, ಬೌದ್ಧ ಧರ್ಮ, ಜೈನ ಧರ್ಮ ಹಾಗೂ ಇತರ ಕಲಾಕೃತಿಗಳಾದ ನಿರಾಕಾರ ದಂಪತಿಗಳು, ಚೌರಿ ಹೊತ್ತವರು, ಡ್ರಮ್ ಬಾರಿಸುವ ಮಹಿಳೆ ಇತ್ಯಾದಿ ಕಲಾಕೃತಿಗಳು ಇನ್ನುಮುಂದೆ ಭಾರತದ ಸಂಗ್ರಹಾಲಯದಲ್ಲಿ ಇರಲಿದೆ.