ಕೋಲ್ಕತ್ತಾ, ಸೆ.26 (DaijiworldNews/PY): "ತಾಲಿಬಾನಿ ಬಿಜೆಪಿ ಸರ್ಕಾರದಿಂದ ದೇಶವನ್ನು ಆಳಲು ಸಾಧ್ಯವಿಲ್ಲ" ಎಂದು ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಹೇಳಿದ್ದಾರೆ.
ಭವಾನಿಪುರದಲ್ಲಿ ನಡೆಯಲಿರುವ ಉಪಚುನಾವಣೆಯ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಅವರು, "ನಾವು ನಮ್ಮ ಸ್ವಾತಂತ್ರ್ಯವನ್ನು ಕಾಪಾಡಿಕೊಳ್ಳಬೇಕಿದೆ. ತಾಲಿಬಾನಿ ಬಿಜೆಪಿ ಸರ್ಕಾರದಿಂದ ಭಾರತವನ್ನು ಆಳಲು ಸಾಧ್ಯವಿಲ್ಲ. ಬಿಜೆಪಿಯನ್ನು ಸೋಲಿಸಲು ತೃಣಮೂಲ ಕಾಂಗ್ರೆಸ್ ಒಂದೇ ಸಾಕು" ಎಂದಿದ್ದಾರೆ.
"ಇಟಲಿಯಲ್ಲಿ ಅಕ್ಟೋಬರ್ನಲ್ಲಿ ನಡೆಯಲಿರುವ ವಿಶ್ವ ಶಾಂತಿ ಸಮಾವೇಶದಲ್ಲಿ ಭಾಗವಹಿಸಲು ಏಷ್ಯಾದ ಪ್ರತಿನಿಧಿಯಾಗಿ ನನ್ನನ್ನು ಆಮಂತ್ರಿಸಲಾಗಿದೆ. ಆದರೆ, ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಕೇಂದ್ರ ಸರ್ಕಾರ ಅನುಮತಿ ನಿರಾಕರಿಸಿದೆ. ಕೇಂದ್ರ ಸರ್ಕಾರ ಇದನ್ನು ಅಸೂಯೆಯಿಂದ ನಿರಾಕರಿಸಿದೆ. ಉಪಚುನಾವಣೆಯಲ್ಲಿ ಭವಾನಿಪುರ ಮತದಾರರು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರಕ್ಕೆ ಮನೆ ದಾರಿ ತೋರಿಸುತ್ತಾರೆ. ಮುಂಬರುವ ದಿನಗಳಲ್ಲಿ ದೇಶದ ಉಳಿದ ಭಾಗಗಳಲ್ಲೂ ಇದನ್ನೇ ಅನುಸರಿಸುತ್ತಾರೆ" ಎಂದು ಹೇಳಿದ್ದಾರೆ.
"ದೇಶದ ಮಂದಿಗೆ ಕಷ್ಟವನ್ನೇ ನೀಡುವ ಬಿಜೆಪಿಯನ್ನು ಮುಂದಿನ ಬಾರಿ ಅಧಿಕಾರದಿಂದ ಕೆಳಗಿಳಿಸಬೇಕು. ಬಿಜೆಪಿಯನ್ನು ಈ ಉಪಚುನಾವಣೆಯಲ್ಲಿ ಸೋಲಿಸಬೇಕು" ಎಂದು ಒತ್ತಾಯಿಸಿದ್ದಾರೆ.