ಬೆಂಗಳೂರು,ಸೆ.25 (DaijiworldNews/HR): ನವೆಂಬರ್ 1ರಂದು 66ನೇ ಕರ್ನಾಟಕ ರಾಜ್ಯೋತ್ಸವ ಆಚರಣೆಯನ್ನು ರಾಜ್ಯ ಸರ್ಕಾರದಿಂದ ಆಚರಿಸಲಾಗುತ್ತಿದ್ದು, ಈ ವರ್ಷ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಅರ್ಹರನ್ನು ಗುರುತಿಸಿ ಆನ್ಲೈನ್ ಮೂಲಕ ಅವರ ಹೆಸರು ಶಿಫಾರಸು ಮಾಡಲು ಸಾರ್ವಜನಿಕರಿಗೆ ಅವಕಾಶ ಕಲ್ಪಿಸಲಾಗಿದೆ ಎಂದು ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ. ಸುನಿಲ್ ಕುಮಾರ್ ಹೇಳಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ಅವರು, "ಈ ಬಾರಿ 66 ಅರ್ಹ ಸಾಧಕರನ್ನು ಗುರುತಿಸಿ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಲಾಗುತ್ತದೆ, ಸಾರ್ವಜನಿಕರು ಯಾರೇ ಆಗಲಿ ಅವರು ಸೇವಾ ಸಿಂಧು ಪೋರ್ಟಲ್ ಮೂಲಕ ರಾಜ್ಯೋತ್ಸವ ಪ್ರಶಸ್ತಿಗಾಗಿ ಸಿದ್ಧಪಡಿಸಲಾಗಿರುವ ವಿಶೇಷ ನಮೂನೆಯ ಅರ್ಜಿಯಲ್ಲಿ ಮೂರು ಹೆಸರುಗಳನ್ನು ಶಿಫಾರಸು ಮಾಡಬಹುದಾಗಿದೆ" ಎಂದರು.
ಇನ್ನು "ಈ ಮೂವರು ಸಾಧಕರುಗಳ ಹೆಸರು, ಅವರು ಯಾವ ಕ್ಷೇತ್ರದಲ್ಲಿ ಸಾಧನೆ ಮಾಡಿದ್ದಾರೆ, ಅವರ ಊರು , ವಿಳಾಸ, ಸಂಪರ್ಕ ಸಂಖ್ಯೆ ಇತ್ಯಾದಿ ವಿವರಗಳನ್ನು ಒದಗಿಸಲು ಈ ಅರ್ಜಿ ನಮೂನೆಯಲ್ಲಿ ಅವಕಾಶ ಕಲ್ಪಿಸಲಾಗಿದೆ.
ಸಾಧನೆ ಮಾಡಿರುವ, ಮಾಡುತ್ತಿರುವ ವ್ಯಕ್ತಿಗಳನ್ನು ಅವರ ಸುತ್ತ ಮುತ್ತಲೂ ಇರುವವರು ಗುರುತಿಸಿ ಅವರ ಸಾಧನೆಯನ್ನು ಸೇವಾ ಸಿಂಧು ಪೋರ್ಟಲ್ ಮೂಲಕ ನಮಗೆ ತಲುಪಿಸಿದರೆ, ಅದನ್ನು ತಜ್ಞರ ಸಮಿತಿಗೆ ನೀಡಿ ಬಳಿಕ ಅದನ್ನು ಅವರು ಪರಿಶೀಲನೆ ಮಾಡಿ ರಾಜ್ಯೋತ್ಸವ ಪ್ರಶಸ್ತಿಗೆ ಅರ್ಹ ಎಂದು ಪರಿಗಣಿಸಿದರೆ ಖಂಡಿತ ಅವರಿಗೆ ಪ್ರಶಸ್ತಿ ಸಿಗುವಂತಾಗುತ್ತದೆ. ಕ್ರೀಡೆ ಹೊರತುಪಡಿಸಿದರೆ ಉಳಿದ ಸಾಧಕರು ಕನಿಷ್ಠ 60 ವರ್ಷ ಮೇಲ್ಪಟ್ಟವರಾಗಿರಬೇಕು ಎಂದು ಹೇಳಿದ್ದಾರೆ.