ಬೆಂಗಳೂರು, ಸೆ.25 (DaijiworldNews/PY): ಕಾಲ ಕಳೆದಂತೆಲ್ಲ ಸಿಎಂರವರ 'ಸರಳತೆ'ಯ ಬಣ್ಣ ತೊಳೆಯುತ್ತಿದೆ, ವಿಜೃಂಭಣೆಯ ಬಣ್ಣ ಮಿಂಚುತ್ತಿದೆ! ಎಂದು ರಾಜ್ಯ ಕಾಂಗ್ರೆಸ್ ಟೀಕಿಸಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಕಾಂಗ್ರೆಸ್, ಸಿಎಂ ಅಂದರೆ ಕಾಮನ್ ಮ್ಯಾನ್ ಎಂದಿದ್ದರು ಸಿಎಂ ಬಸವರಾಜ ಬೊಮ್ಮಾಯಿ ಅವರು. ಆದರೆ ಈಗ ಸಿಎಂ ಪ್ರಯಾಣಿಸುವ ಒಂದೇ ಕಾರಣಕ್ಕೆ 50 ಕಡೆ ರಸ್ತೆಯ ಹಂಪ್ಸ್ ತೆಗೆಯಲಾಗಿದೆ, ಇದೇನಾ ಸರಳತೆ? ಹಂಪ್ಸ್ ತೆಗೆಯಲು, ಹಾಕಲು ತಗುಲುವ ಖರ್ಚು ಅನಗತ್ಯವಲ್ಲವೇ? ಕಾಲ ಕಳೆದಂತೆಲ್ಲ ಸಿಎಂರವರ 'ಸರಳತೆ'ಯ ಬಣ್ಣ ತೊಳೆಯುತ್ತಿದೆ, ವಿಜೃಂಭಣೆಯ ಬಣ್ಣ ಮಿಂಚುತ್ತಿದೆ! ಎಂದು ಹೇಳಿದೆ.
"ಕರೋನಾ, ಲಾಕ್ಡೌನ್, ಬೆಲೆ ಏರಿಕೆ, ಅತಿವೃಷ್ಟಿಯಂತಹ ಸವಾಲುಗಳ ನಡುವೆಯೂ ರೈತರು ಬದುಕುವ ಅನಿವಾರ್ಯತೆಯಲ್ಲಿ, ಸಂಕಷ್ಟದಲ್ಲಿ ಕೃಷಿ ಮುಂದುವರೆಸಿದ್ದಾರೆ. ಈರುಳ್ಳಿ, ಹಸಿಮೆಣಸು ಬೆಳೆಗಳ ಬೆಲೆ ಕುಸಿದು ಬೆಳೆ ಕಟಾವಿನ ಮೊತ್ತವೂ ರೈತರಿಗೆ ಸಿಗದಂತಾಗಿದೆ. ರೈತರ ನೆರವಿಗೆ ಧಾವಿಸದೆ ಕಣ್ಮುಚ್ಚಿ ಕುಳಿತಿದೆ ಹೃದಯಹೀನ ಬಿಜೆಪಿ ಸರ್ಕಾರ" ಎಂದಿದೆ.
"ಎನ್ಇಪಿ - ನಾಗಪುರ ಎಜ್ಯುಕೇಶನ್ ಪಾಲಿಸಿಯನ್ನು ಸದನದಲ್ಲಿ ಚರ್ಚೆಸಲು ಹಿಂದೇಟು ಹಾಕಿದ ಬಿಜೆಪಿ ಪಲಾಯನವಾದ ಅನುಸರಿಸಿದೆ. ಇಂತಹ ಗಂಭೀರ ವಿಷಯಗಳಲ್ಲಿ ಸಾಕಷ್ಟು ಚರ್ಚೆ, ಮಂಥನ, ವಿಮರ್ಶೆಗಳ ನಂತರವೇ ತೀರ್ಮಾನ ಕೈಗೊಳ್ಳಬೇಕು. ಆದರೆ ಜಾರಿಗೊಳಿಸುವ ತುರಾತುರಿಯಲ್ಲಿರುವ ಸರ್ಕಾರ ರಾಜ್ಯದ ಮಕ್ಕಳ ಭವಿಷ್ಯದ ವಿಚಾರದಲ್ಲಿ ಆಟವಾಡುತ್ತಿದೆ" ಎಂದು ಹೇಳಿದೆ.