ಭೋಪಾಲ್, ಸೆ.25 (DaijiworldNews/PY): "ಇತ್ತೀಚೆಗೆ ಮಹಿಳಾ ಕಾನ್ಸ್ಟೇಬಲ್ ಮೇಲೆ ಮೂರು ಸಾಮೂಹಿಕ ಅತ್ಯಾಚಾರ ಎಸಗಿರುವ ಘಟನೆ ಮಧ್ಯ ಪ್ರದೇಶದ ನೀಮಚ್ ಜಿಲ್ಲೆಯಲ್ಲಿ ನಡೆದಿದ್ದು, ಆರೋಪಿಗಳು ವಿಡಿಯೋ ಚಿತ್ರೀಕರಣ ಮಾಡಿ ಸಂತ್ರಸ್ತೆಯನ್ನು ಬೆದರಿಸಿದ್ದರು" ಎಂದು ಅಧಿಕಾರಿಯೋರ್ವರು ಹೇಳಿದ್ದಾರೆ.
ಸೆಪ್ಟೆಂಬರ್ ತಿಂಗಳ ಆರಂಭದಲ್ಲಿ ಅತ್ಯಾಚಾರ ಎಸಗಲಾಗಿದ್ದು. ಸೆ.13ರಂದು ಸಂತ್ರಸ್ತೆ ದೂರು ನೀಡಿದ್ದರು. ನಂತರ ತನಿಖೆ ನಡೆಸಲಾಗಿದ್ದು, ಓರ್ವ ಆರೋಪಿಯ ತಾಯಿಯೂ ಸೇರಿದಂತೆ ಒಟ್ಟು ಐವರ ವಿರುದ್ದ ಪ್ರಕರಣ ದಾಖಲಾಗಿದೆ. ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.
"ಪ್ರಕರಣದ ಪ್ರಮುಖ ಆರೋಪಿ ಹಾಗೂ ಆತನ ತಾಯಿಯನ್ನು ಬಂಧಿಸಲಾಗಿದೆ" ಎಂದು ಮಹಿಳಾ ಪೊಲೀಸ್ ಠಾಣೆಯ ಉಸ್ತುವಾರಿ ಅನುರಾಧಾ ಗಿರ್ವಾಲ್ ಹೇಳಿದ್ದಾರೆ.
"ಆರೋಪಿ ಸಂತ್ರಸ್ತೆಯ ಜೊತೆ ಫೇಸ್ಬುಕ್ನಲ್ಲಿ ಸ್ನೇಹ ಬೆಳೆಸಿದ್ದ ಹಾಗೂ ಎಪ್ರಿಲ್ನಿಂದ ಆಕೆಯ ಜೊತೆ ವ್ಯಾಟ್ಸ್ಆ್ಯಪ್ನಲ್ಲಿ ಸಂವಹನ ನಡೆಸುತ್ತಿದ್ದ. ಇತ್ತೀಚೆಗೆ ಆರೋಪಿ ಸಂತ್ರಸ್ತೆಯನ್ನು ತನ್ನ ಸಹೋದರನ ಹುಟ್ಟುಹಬ್ಬದ ಪಾರ್ಟಿಗೆ ಆಹ್ಬಾನಿಸಿದ್ದ. ಅಲ್ಲಿಗೆ ತೆರಳಿದ್ದ ಸಂದರ್ಭ ಸಾಮೂಹಿಕ ಅತ್ಯಾಚಾರ ಎಸಗಲಾಗಿದೆ" ಎಂದು ಗಿರ್ವಾಲ್ ಮಾಹಿತಿ ನೀಡಿದ್ದಾರೆ.
ಪ್ರಮುಖ ಆರೋಪಿ, ಆತನ ಸಹೋದರ ಹಾಗೂ ಮತ್ತೋರ್ವ ವ್ಯಕ್ತಿ ಅತ್ಯಾಚಾರ ಎಸಗಿದ್ದಾನೆ ಎಂದು ಸಂತ್ರಸ್ತೆ ದೂರಿನಲ್ಲಿ ತಿಳಿಸಿರುವುದಾಗಿ ಅಧಿಕಾರಿ ಹೇಳಿದ್ದಾರೆ.
"ಪ್ರಮುಖ ಆರೋಪಿಯ ತಾಯಿ ಕೂಡಾ ಬೆದರಿಕೆ ಹಾಕಿದ್ದು, ಅವರ ಸಂಬಂಧಿಕರೊಬ್ಬರ ಹತ್ಯೆ ಮಾಡುವುದಾಗಿ ಬೆದರಿಕೆ ಹಾಕಿದ್ದಲ್ಲದೇ, ಹಣ ದೋಚಲು ಯತ್ನಿಸಿದ್ದರು" ಎಂದು ಸಂತ್ರಸ್ತೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.