ನವದೆಹಲಿ, ಸೆ 25 (DaijiworldNews/MS): ವಿಶ್ವ ಸಂಸ್ಥೆಯ 76ನೇ ಸಭೆಯಲ್ಲಿ (ಯುಎನ್ಜಿಎ) ಪಾಕ್ ಪ್ರಧಾನಿ ಇಮ್ರಾನ್ ಖಾನ್ ಆರೋಪಕ್ಕೆ ಖಡಕ್ ತಿರುಗೇಟು ನೀಡಿರುವ ಭಾರತದ ಪ್ರತಿನಿಧಿ "ಪಾಕಿಸ್ತಾನವು ಕಾನೂನುಬಾಹಿರವಾಗಿ ಆಕ್ರಮಿಸಿಕೊಂಡಿರುವ ಎಲ್ಲಾ ಪ್ರದೇಶಗಳನ್ನು ತಕ್ಷಣವೇ ಖಾಲಿ ಮಾಡಬೇಕು" ಎಂಬ ಸಂದೇಶ ರವಾನಿಸಿದ್ದರು.
ಪಾಕಿಸ್ತಾನವನ್ನು ತರಾಟೆಗೆ ತೆಗೆದುಕೊಂಡ ಯುವ ರಾಜತಾಂತ್ರಿಕ ಪ್ರತಿನಿಧಿ ಸ್ನೇಹಾ ದುಬೆಯ ಬಗ್ಗೆ ಇದೀಗ ದೇಶಾದ್ಯಂತ ಮೆಚ್ಚುಗೆ ವ್ಯಕ್ತವಾಗುತ್ತಿದೆ. "ಬೆಂಕಿ ಹಚ್ಚುವ ಕಾರ್ಯ ಮಾಡುತ್ತಿರುವ ಪಾಕಿಸ್ತಾನ, ತನ್ನನ್ನು ತಾನು ಅಗ್ನಿಶಾಮಕ ವೇಷಧಾರಿಯಾಗಿ ಬೆಂಕಿ ನಂದಿಸುತ್ತಿರುವಂತೆ ಜಗತ್ತಿನೆದುರು ಸೋಗು ಹಾಕಿದೆ. ಪಾಕಿಸ್ತಾನದ ನಾಯಕರು ವಿಶ್ವಸಂಸ್ಥೆ ಒದಗಿಸಿದ ವೇದಿಕೆಗಳನ್ನು ನನ್ನ ದೇಶದ ವಿರುದ್ಧ ಸುಳ್ಳು ಹಾಗೂ ದುರುದ್ದೇಶಪೂರಿತ ಪ್ರಚಾರ ಮಾಡಲು ಬಳಸಿಕೊಳ್ಳುತ್ತಿರುವುದು ಇದೇ ಮೊದಲಲ್ಲ. ಭಯೋತ್ಪಾದಕರು ಉಚಿತ ಪಾಸ್ ನೊಂದಿಗೆ ಓಡಾಡಿಕೊಂಡಿರುವ ದೇಶವು ವಿಶ್ವದ ಗಮನವನ್ನು ಬೇರೆಡೆಗೆ ಸೆಳೆಯಲು ವ್ಯರ್ಥ ಪ್ರಯತ್ನ ಮಾಡುವುದು ಕೂಡ ಇದೇ ಮೊದಲೇನಲ್ಲ. ಮೊದಲು ನೀವು ಕಾನೂನುಬಾಹಿರ ಅಕ್ರಮಿಸಿಕೊಂಡಿರುವ ಎಲ್ಲಾ ಪ್ರದೇಶಗಳನ್ನು ತಕ್ಷಣವೇ ಖಾಲಿ ಮಾಡಿ ಎಂದು ಎಚ್ಚರಿಕೆಯ ಸಂದೇಶ ರವಾನಿಸಿದ್ದರು.
ನಿರರ್ಗಳವಾಗಿ ಭಾಷಣ ಮಾಡಿರುವ ಭಾರತದ ಕಾರ್ಯದರ್ಶಿ ಸ್ನೇಹಾ ದುಬೆ ವಿಡಿಯೋ ವೈರಲ್ ಆಗುತ್ತಿದ್ದಂತೆ ದೇಶದ ಜನರು ಅವರ ಮಾತಿಗೆ ಫಿದಾ ಆಗಿದ್ದಾರೆ. ಇವರ ಧೈರ್ಯ ಖಡಕ್ ನೇರ ಮಾತಿಗೆ ನೆಟ್ಟಿಗರು ಶಹಬಾಸ್ ಗಿರಿ ನೀಡಿದ್ದಾರೆ.
ಯಾರಿಕೆ ಯುವ ರಾಜತಾಂತ್ರಿಕ ಪ್ರತಿನಿಧಿ?
ಸ್ನೇಹಾ ಅವರು 2012 ರ ಬ್ಯಾಚ್ನ ಐಎಫ್ಎಸ್ ಅಧಿಕಾರಿಯಾಗಿದ್ದು, ಗೋವಾದಲ್ಲಿ ಶಾಲಾ ಶಿಕ್ಷಣ ಪಡೆದವರು. ಬಳಿಕ ಪುಣೆಯ ಫರ್ಗ್ಯುಸನ್ ಕಾಲೇಜಿನಲ್ಲಿ ಕಾಲೇಜು ಶಿಕ್ಷಣ ಪಡೆದಿದ್ದಾರೆ. ದೆಹಲಿಯ ಜವಾಹರ್ ಲಾಲ್ ನೆಹರು ವಿಶ್ವವಿದ್ಯಾಲಯದಲ್ಲಿ ಎಂ.ಫಿಲ್ ಪದವಿ ಪಡೆದಿದ್ದಾರೆ.
ಆಕೆಯ ಮೊದಲ ನೇಮಕಾತಿಯು ವಿದೇಶಾಂಗ ವ್ಯವಹಾರಗಳ ಸಚಿವಾಲಯದಲ್ಲಿ ಆಗಿತ್ತು. 2014 ರಲ್ಲಿ ವಿಶ್ವಸಂಸ್ಥೆಗೆ ನೇಮಕಗೊಳ್ಳುವ ಮೊದಲು ಅವರು ಮ್ಯಾಡ್ರಿಡ್ನಲ್ಲಿ ಭಾರತದ ಮೂರನೇ ಕಾರ್ಯದರ್ಶಿಯಾಗಿದ್ದರು.
ಚಿಕ್ಕ ವಯಸ್ಸಿನಿಂದಲೂ, ಸ್ನೇಹಾ ಇಂಡಿಯನ್ ಫಾರಿನ್ ಸರ್ವೀಸ್ ಗೆ ಗೆ ಸೇರಲು ಬಯಸಿದ್ದರು. 2011 ರಲ್ಲಿ ಮೊದಲ ಪ್ರಯತ್ನದಲ್ಲೇ ನಾಗರಿಕ ಸೇವೆಗಳ ಪರೀಕ್ಷೆಯಲ್ಲಿ ಉತ್ತೀರ್ಣರಾದರು.
ಸ್ನೇಹಾ ತನ್ನ ಕುಟುಂಬದಲ್ಲಿ ಸರ್ಕಾರಿ ಸೇವೆಗೆ ಸೇರಿದ ಮೊದಲ ವ್ಯಕ್ತಿಯಾಗಿದ್ದಾರೆ. ವಿದೇಶಿ ಸೇವೆಗಳಿಗೆ ಸೇರಲು, ಅಂತಾರಾಷ್ಟ್ರೀಯ ವ್ಯವಹಾರಗಳನ್ನು ಕಲಿಯುವ ಆಸಕ್ತಿ ಹಾಗೂ ಹೊಸ ಸಂಸ್ಕೃತಿ, ದೇಶವನ್ನು ಪ್ರತಿನಿಧಿಸುವ ಆಸೆ ಪ್ರಮುಖ ನೀತಿ ನಿರ್ಧಾರಗಳ ಭಾಗವಾಗಿ ಜನರಿಗೆ ಸಹಾಯ ಮಾಡುವ ಆಸೆಗಳೇ ಅವರ ಸ್ಪೂರ್ತಿ ಎಂದು ಅವರು ಹೇಳುತ್ತಾರೆ.
ಆಕೆಯ ತಂದೆ ಬಹುರಾಷ್ಟ್ರೀಯ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರೆ, ತಾಯಿ ಶಾಲಾ ಶಿಕ್ಷಕಿಯಾಗಿದ್ದಾರೆ.
ಇವರ ಮೊದಲ ನೇಮಕಾತಿಯು ವಿದೇಶಾಂಗ ವ್ಯವಹಾರಗಳ ಸಚಿವಾಲಯದಲ್ಲಿ ಆಗಿತ್ತು. 2014 ರಲ್ಲಿ ವಿಶ್ವಸಂಸ್ಥೆಗೆ ನೇಮಕಗೊಳ್ಳುವ ಮೊದಲು ಅವರು ಮ್ಯಾಡ್ರಿಡ್ನಲ್ಲಿ ಭಾರತದ ಮೂರನೇ ಕಾರ್ಯದರ್ಶಿಯಾಗಿದ್ದರು. ಸದ್ಯ ವಿಶ್ವಸಂಸ್ಥೆಯಲ್ಲಿ ಭಾರತದ ಕಾರ್ಯದರ್ಶಿಯಾಗಿದ್ದಾರೆ.