ಬೆಂಗಳೂರು, ಸೆ.25 (DaijiworldNews/PY): "ಭಾರತ್ ಬಂದ್ ವಿಚಾರದ ಬಗ್ಗೆ ನಾನ್ಯಾಕೆ ಪ್ರತಿಕ್ರಿಯಿಸಬೇಕು" ಎಂದು ಸಿಎಂ ಬಸವರಾಜ ಬೊಮ್ಮಾಯಿ ಪ್ರಶ್ನಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಯಾರಾದರೂ ಬಂದ್ಗೆ ಕರೆ ನೀಡಿದ್ದಲ್ಲಿ ಜನಸಾಮಾನ್ಯರಿಗೆ ತೊಂದರೆಯಾಗದ ರೀತಿಯಲ್ಲಿ ರಕ್ಷಣೆ ಮಾಡುವುದು ನಮ್ಮ ಕರ್ತವ್ಯ" ಎಂದು ತಿಳಿಸಿದ್ದಾರೆ.
"ಕೊರೊನಾ ಕಾರಣದ ಹಿನ್ನೆಲೆ ಒಂದೂವರೆ ವರ್ಷದಿಂದ ಎಲ್ಲಾ ಕೆಲಸಗಳು ಸ್ಥಗಿತಗೊಂಡಿದ್ದು, ಈಗಷ್ಟೇ ಪುನರಾರಂಭಗೊಂಡು ಚೇತರಿಕೆ ಕಾಣುತ್ತಿದೆ. ಇಂತಹ ಸಮಯದಲ್ಲಿ ಭಾರತ್ ಬಂದ್ಗೆ ಕರೆ ನೀಡಲಾಗಿದೆ. ಇದರಿಂದ ಜನಸಾಮಾನ್ಯರಿಗೆ ಯಾವುದೇ ತೊಂದರೆಯಾಗದ ರೀತಿಯಲ್ಲಿ ಸೂಕ್ತ ಮುಂಜಾಗ್ರತೆ ವಹಿಸಲಾಗುವುದು" ಎಂದು ಹೇಳಿದ್ದಾರೆ.
ಖಾಸಗಿ ಶಾಲಾ ಆಡಳಿತ ಮಂಡಳಿಗಳ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಡಿ.ಶಶಿಕುಮಾರ್ ಪ್ರತಿಕ್ರಿಯೆ ನೀಡಿದ್ದು, "ದೇಶಾದ್ಯಂತ ನಡೆಯುತ್ತಿರುವ ರೈತರ ಪ್ರತಿಭಟನೆಗೆ ನಮ್ಮ ನೈತಿಕ ಬೆಂಬಲ ಇದೆ. ಶಾಲೆಗಳಿಗೆ ರಜೆ ನೀಡುವ ಪರಿಸ್ಥಿತಿ ಇಲ್ಲ. ಸರ್ಕಾರ ಪೂರ್ಣ ತರಗತಿ ನಡೆಸಬೇಕು ಎಂದು ಸೂಚನೆ ನೀಡಿರುವ ಕಾರಣ ಶಾಲೆಗಳು ಎಂದಿನಂತೆ ನಡೆಯಲಿವೆ. ಆದರೆ, ಶಿಕ್ಷಕರು ಮಾತ್ರ ಹಸಿರು ಬಟ್ಟೆ ಧರಿಸಿ ಬೆಂಬಲ ವ್ಯಕ್ತಪಡಿಸಲಿದ್ದಾರೆ" ಎಂದಿದ್ದಾರೆ.
ಸಂಯುಕ್ತ ಕಿಸಾನ್ ಮೋರ್ಚಾ ಕೇಂದ್ರದ ಮೂರು ಕೃಷಿ ಕಾಯ್ದೆಗಳನ್ನು ವಿರೋಧಿಸಿ ಸೆ.27ರಂದು ಕರೆ ನೀಡಿದ್ದು, ರಾಜ್ಯದ ಖಾಸಗಿ ಶಾಲಾ ಶಿಕ್ಷಕರು ಹಸಿರು ಬಟ್ಟೆ ಧರಿಸಿ ಭಾರತ್ ಬಂದ್ಗೆ ಬೆಂಬಲಿಸಲು ತೀರ್ಮಾನಿಸಿದ್ದಾರೆ.