ನಾಗಪಟ್ಟಣ ಸೆ 25 (DaijiworldNews/MS): ಕೋಡಿಯಕರೈ ಕರಾವಳಿಯಲ್ಲಿ ಶ್ರೀಲಂಕಾದ ಮೀನುಗಾರರ ಗುಂಪೊಂದು ದಾಳಿ ಮಾಡಿದ ನಂತರ ತಮಿಳುನಾಡಿನ ಮೂವರು ಮೀನುಗಾರರು ಗಂಭೀರವಾಗಿ ಗಾಯಗೊಂಡಿದ್ದಾರೆ.
ವೇದಾರಣ್ಯಂ ಸಮೀಪದ ಅರುಕೊಟ್ಟುತುರೈನ ಮೀನುಗಾರರು ಇಂದು ಕೋಡಿಯಕರೈ ಕರಾವಳಿಯಲ್ಲಿ ಆಗ್ನೇಯದಲ್ಲಿ ಮೂನಿ ಹಿಡಿಯುತ್ತಿದ್ದಾಗ ದಾಳಿಗೆ ಒಳಗಾದರು ಎಂದು ಕರಾವಳಿ ಭದ್ರತಾ ಗುಂಪು (ಸಿಎಸ್ಜಿ) ಪೊಲೀಸರು ತಿಳಿಸಿದ್ದಾರೆ
ಮೂರು ದೋಣಿಗಳಲ್ಲಿ ಬಂದಿದ್ದ ಶ್ರೀಲಂಕಾ ಮೀನುಗಾರರು ಕಬ್ಬಿಣದ ಸರಳುಗಳಿಂದ ದಾಳಿ ಮಾಡಿದ್ದಾರೆ. ತಮಿಳುನಾಡಿನ ಮೀನುಗಾರರ ಬಳಿಯಿದ್ದ ಕ್ಯಾಚ್, ಮೀನು ಹಿಡಿಯುವ ಬಲೆಗಳು, ಮೊಬೈಲ್ ಫೋನ್ಗಳು, ಜಿಪಿಎಸ್ ಉಪಕರಣಗಳನ್ನು ದೋಚಿದ್ದಾರೆ ಎಂದು ಸಿಎಸ್ಜಿ ಪೊಲೀಸರು ತಿಳಿಸಿದ್ದಾರೆ.
ಈ ದಾಳಿಯನ್ನು ಖಂಡಿಸಿ ಅರುಕೊಟ್ಟುತುರೈನಲ್ಲಿ ಮೀನುಗಾರರ ಸಂಘದ ಸದಸ್ಯರು ದಿಢೀರ್ ಪ್ರತಿಭಟನೆ ನಡೆಸಿದರು.ಗಾಯಗೊಂಡ ಮೀನುಗಾರರು ಇಂದು ಬೆಳಿಗ್ಗೆ ದಡಕ್ಕೆ ಮರಳಿದ್ದು ನಾಗಪಟ್ಟಣಂ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ನಾಗಪಟ್ಟಣಂ ಜಿಲ್ಲಾಧಿಕಾರಿ ಅರುಣ್ ತಂಬುರಾಜ್ ಆಸ್ಪತ್ರೆಗೆ ಭೇಟಿ ನೀಡಿ ಮೀನುಗಾರರಿಗೆ ನೀಡುತ್ತಿರುವ ಚಿಕಿತ್ಸೆಯ ಬಗ್ಗೆ ವಿಚಾರಿಸಿದ್ದಾರೆ.
ಮೀನುಗಾರಿಕೆ ಇಲಾಖೆ ಅಧಿಕಾರಿಗಳು ಮತ್ತು ಸಿಎಸ್ಜಿ ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.