ಬೆಂಗಳೂರು, ಸೆ.25 (DaijiworldNews/HR): "ಲೋಕಸಭಾಧ್ಯಕ್ಷರು ವಿಧಾನಸಭೆಗಳಲ್ಲಿ ಮಾತನಾಡಿರುವುದು ಇದು ಮೊದಲೇನಲ್ಲ. ಈ ಹಿಂದೆ ಎಸ್.ಎಂ. ಕೃಷ್ಣ ಅವರ ಅವಧಿಯಲ್ಲಿ ಕೂಡ ಈ ರೀತಿ ನಡೆದಿತ್ತು" ಎಂದು ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದ್ದಾರೆ.
ವಿಧಾನ ಮಂಡಲದ ಜಂಟಿ ಸದನವನ್ನು ಲೋಕಸಭಾಧ್ಯಕ್ಷರು ಮಾಡಿದ ಭಾಷಣವನ್ನು ಕಾಂಗ್ರೆಸ್ ಬಹಿಷ್ಕರಿಸಿದ ಬಗ್ಗೆ ಪ್ರತಿಕ್ರಿಯಿಸಿದ ಅವರು, "ವಿರೋಧ ಪಕ್ಷದ ನಾಯಕರ ಜೊತೆ ಸದನದಲ್ಲಿ ಮಾತನಾಡಿಯೇ ಜಂಟಿ ಸದನಗಳ ಭಾಷಣಕ್ಕೆ ತೀರ್ಮಾನ ಮಾಡಿದ್ದೆವು. ವಿರೋಧ ಪಕ್ಷಗಳು ಸಹಕರಿಸುವುದಾಗಿ ಹೇಳಿದ್ದರು" ಎಂದರು.
ಇನ್ನು "ಇದೇ ವಿಧಾನಸಭೆಯಲ್ಲಿ 2002 ಜೂನ್ 24ರಂದು, ಅಂದಿನ ಲೋಕಸಭಾಧ್ಯಕ್ಷರಾಗಿದ್ದ ಮನೋಹರ್ ಜೋಶಿ ಭಾಷಣ ಮಾಡಿದ್ದು, ಆಗ ಎಸ್.ಎಂ. ಕೃಷ್ಣ ಅವರು ರಾಜ್ಯದ ಮುಖ್ಯಮಂತ್ರಿ ಆಗಿದ್ದರು. ವಿಧಾನಸಭೆಗಳಲ್ಲಿ ಲೋಕಸಭಾಧ್ಯಕ್ಷರು ಮಾತನಾಡಿರುವುದು ಇದು ಮೊದಲೇನಲ್ಲ. ಬೇರೆ ರಾಜ್ಯಗಳ ವಿಧಾನಸಭೆಗಳಲ್ಲೂ ಲೋಕಸಭಾಧ್ಯಕ್ಷರು ಭಾಷಣ ಮಾಡಿದ್ದಾರೆ" ಎಂದು ಹೇಳಿದ್ದಾರೆ.