ನವದೆಹಲಿ, ಸೆ.25 (DaijiworldNews/PY): ಲೇಖಕಿ, ಮಹಿಳಾ ಹಕ್ಕುಗಳ ಹೋರಾಟಗಾರ್ತಿ ಕಮಲಾ ಭಾಸಿನ್ (75) ಅವರು ಶನಿವಾರ ನಿಧನರಾದರು.
"ಕಮಲಾ ಭಾಸಿನ್ ಅವರು ಶನಿವಾರ ಮುಂಜಾನೆ 3 ಗಂಟೆಯ ವೇಳೆ ವಿಧಿವಶರಾಗಿದ್ದಾರೆ" ಎಂದು ಹೋರಾಟಗಾರ್ತಿ ಕವಿತಾ ಶ್ರೀವಾಸ್ತವ ಅವರು ಟ್ವೀಟ್ ಮೂಲಕ ತಿಳಿಸಿದ್ದಾರೆ.
"ಕಮಲಾ ಭಾಸಿನ್ ಅವರು ಭಾರತ ಹಾಗೂ ಇತರ ದಕ್ಷಿಣ ಏಷ್ಯಾದ ದೇಶಗಳಲ್ಲಿ ಮಹಿಳಾ ಚಳುವಳಿಯಲ್ಲಿ ಪಾಲ್ಗೊಂಡಿದ್ದರು. ಇದು ಭಾರತ ಮತ್ತು ದಕ್ಷಿಣ ಏಷ್ಯಾ ಪ್ರದೇಶದ ಮಹಿಳಾ ಚಳುವಳಿಗೆ ದೊಡ್ಡ ಹಿನ್ನಡೆಯಾಗಿದೆ" ಎಂದು ಟ್ವೀಟ್ ಮಾಡಿದ್ದಾರೆ.
ಕಮಲಾ ಭಾಸಿನ್ ಅವರು ಲಿಂಗ ಸಿದ್ಧಾಂತ ಮತ್ತು ಸ್ತ್ರೀವಾದದ ಕುರಿತು ಹಲವಾರು ಪುಸ್ತಕಗಳನ್ನು ಬರೆದಿದ್ದು,ಈ ಪೈಕಿ ಹಲವು ಪುಸ್ತಕಗಳು 30ಕ್ಕೂ ಹೆಚ್ಚು ಭಾಷೆಗಳಿಗೆ ಅನುವಾದಗೊಂಡಿವೆ.