ಭರಮಸಾಗರ, ಸೆ.25 (DaijiworldNews/HR): ಸ್ವಾಮೀಜಿಗಳ ಮಾರ್ಗದರ್ಶನದಂತೆ ಆಡಳಿತ ನಡೆಸುತ್ತೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೇಳಿದ್ದಾರೆ.
ಸಿರಿಗೆರೆಯ ಗುರುಶಾಂತೇಶ್ವರ ದಾಸೋಹ ಮಂಟಪದಲ್ಲಿ ನಡೆದ ಲಿಂಗೈಕ್ಯ ಶಿವಕುಮಾರ ಶಿವಾಚಾರ್ಯ ಸ್ವಾಮೀಜಿಯವರ 29ನೇ ಶ್ರದ್ಧಾಂಜಲಿ ಕಾರ್ಯಕ್ರಮ(ವರ್ಚುವಲ್)ದಲ್ಲಿ ಮಾತನಾಡಿದ ಅವರು, "ಲಿಂ.ಶಿವಕುಮಾರ ಶಿವಾಚಾರ್ಯ ಸ್ವಾಮೀಜಿಯವರು ಜನಸಾಮಾನ್ಯರ ಜೊತೆ ಬೆರೆತು ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದರು. ಪರಿಶಿಷ್ಟರು, ಗಿರಿಜನರು, ಬಡವರ ಬಗ್ಗೆ ದನಿ ಎತ್ತಿದವರು. ಶೈಕ್ಷಣಿಕ, ಸಾಂಸ್ಕೃತಿಕ, ಆಧ್ಯಾತ್ಮಿಕ, ಧಾರ್ಮಿಕ ತಳಹದಿಗೆ ಒತ್ತು ನೀಡಿದವರು" ಎಂದರು.
ಇನ್ನು " ನಡೆದಂತೆ ನುಡಿ, ನುಡಿದಂತೆ ನಡೆ ಎಂಬುದು ಅವರ ತತ್ವ. ಶ್ರೀಮಠದ ವ್ಯಾಪ್ತಿಯ ರೈತರಿಗೆ ಅವರ ಆಶೀರ್ವಾದ ಇತ್ತು. ಗ್ರಾಮೀಣ ಪ್ರದೇಶದಲ್ಲಿ ಶಿಕ್ಷಣ ಕ್ರಾಂತಿ ಮಾಡಿದವರು. ಅವರ ಮಾರ್ಗದಲ್ಲಿಯೇ ಇಂದಿನ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ನಡೆಯುತ್ತಿದ್ದಾರೆ. ಅವರ ಮಾರ್ಗದರ್ಶನದಂತೆ ಆಡಳಿತ ನಡೆಸುತ್ತೇನೆ" ಎಂದಿದ್ದಾರೆ.
"ಶ್ರೀಮಠದ ಚರಿತ್ರೆಯಲ್ಲಿಯೇ ಲಿಂಗೈಕ್ಯ ಸ್ವಾಮಿಗಳ ಸಾಧನೆ ಅಸಾಮಾನ್ಯವಾಗಿದ್ದು, ಅವರು ಇಟ್ಟ ದಿಟ್ಟ ಹೆಜ್ಜೆ ಆಶ್ಚರ್ಯ ಮೂಡಿಸುವಂತಹದ್ದು. ಅವರ ಜೀವನ ಪೀಠಾಧಿಪತಿಗಳಾದವರಿಗೆ ಮಾರ್ಗದರ್ಶನ' ಎಂದು ಮೈಸೂರಿನ ಸುತ್ತೂರು ಮಠದ ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿ ಹೇಳಿದ್ದಾರೆ.