ಮುಂಬೈ, ಸೆ.25 (DaijiworldNews/PY): ಅಶ್ಲೀಲ ಸಿನಿಮಾ ನಿರ್ಮಾಣ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲು ಸೇರಿದ್ದ ರಾಜ್ ಕುಂದ್ರಾ ಅವರಿಗೆ ಸೆ.20ರಂದು ಜಾಮೀನು ದೊರಕಿದ್ದು, ಜೈಲಿನಿಂದ ಹೊರಬಂದಿದ್ದಾರೆ. ಇದಾದ ಬೆನ್ನಲ್ಲೇ ರಾಜ್ ಕುಂದ್ರಾ ಪತ್ನಿ ಶಿಲ್ಪಾ ಶೆಟ್ಟಿ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ವೊಂದನ್ನು ಮಾಡಿದ್ದಾರೆ.
ಕ್ರಿಸ್ಟಿಯನ್ ಬರ್ನಾರ್ಡ್ ಅವರ ಪುಸ್ತಕದ ಉಲ್ಲೇಖವನ್ನು ಹಂಚಿಕೊಂಡ ಅವರು, "ಕಷ್ಟದ ಸಮಯಗಳಿಂದ ಚೇತರಿಕೆ" ಎಂದು ಬರೆದುಕೊಂಡಿದ್ದಾರೆ.
ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಎಸ್ ಬಿ ಭಾಜಿಪಾಲೆ ಅವರು ಸೋಮವಾರ 50,000 ರೂಪಾಯಿ ಬಾಂಡ್ ನೀಡುವ ಮೂಲಕ ಕುಂದ್ರಾ ಅವರ ಜಾಮೀನು ಅರ್ಜಿಗೆ ಅನುಮತಿ ನೀಡಿದರು ಎಂದು ಸುದ್ದಿಸಂಸ್ಥೆಯೊಂದು ವರದಿ ಮಾಡಿದೆ.
ರಾಜ್ ಕುಂದ್ರಾ ಅವರ ಜೊತೆಗೆ ಪ್ರಕರಣದಲ್ಲಿ ಆರೋಪಿಯಾಗಿದ್ದ ರಿಯಾನ್ ಥ್ರೋಪೆ ಅವರಿಗೂ ನ್ಯಾಯಾಲಯ ಜಾಮೀನು ನೀಡಿದೆ.
ಅಶ್ಲೀಲ ಚಿತ್ರಗಳ ನಿರ್ಮಾಣ ದಂಧೆ ಪ್ರಕರಣಕ್ಕೆ ಸಂಬಂಧಿಸಿದಂತೆ ಉದ್ಯಮಿ ರಾಜ್ ಕುಂದ್ರಾ ಅವರನ್ನು ಜುಲೈ 19 ರಂದು ಬಂಧಿಸಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಸಪ್ಲಿಮೆಂಟರಿ ಚಾರ್ಜ್ ಶೀಟ್ ಸಲ್ಲಿಸಿದ ಬಳಿಕ ಜಾಮೀನು ಕೋರಿ ನ್ಯಾಯಾಲಯಕ್ಕೆ ರಾಜ್ ಕುಂದ್ರಾ ಅರ್ಜಿ ಸಲ್ಲಿಸಿದ್ದರು. ಪರಿಣಾಮ, 50 ಸಾವಿರ ರೂ.ಗಳ ಶ್ಯೂರಿಟಿ ಮೇರೆಗೆ ರಾಜ್ ಕುಂದ್ರಾಗೆ ಮುಂಬೈ ನ್ಯಾಯಾಲಯ ಜಾಮೀನು ನೀಡಿದೆ.