ಒಡಿಶಾ, ಸೆ 25 (DaijiworldNews/MS): ಕಟಕ್ ಜಿಲ್ಲೆಯ ಮುಂಡಾಲಿ ಸೇತುವೆಯ ಬಳಿ ಮಹಾನದಿ ನದಿಯ ಮಧ್ಯದಲ್ಲಿ ಸಿಲುಕಿಕೊಂಡಿದ್ದ ಆನೆಯನ್ನು ರಕ್ಷಿಸುವ ಪ್ರಯತ್ನದಲ್ಲಿ ಘೋರ ದುರಂತವೊಂದು ಸಂಭವಿಸಿದ್ದು, ಕಾರ್ಯಾಚರಣೆ ವೇಳೆ ಸ್ಥಳೀಯ ಸುದ್ದಿ ವಾಹಿನಿಯ ಪತ್ರಕರ್ತ ಸಾವಿಗೀಡಾಗಿದ್ದು, ರಕ್ಷಣಾ ಸಿಬ್ಬಂದಿ ನಾಪತ್ತೆಯಾಗಿದ್ದಾರೆ.
ಮುಂಡಾಲಿ ಸೇತುವೆಯಲ್ಲಿ ಉಂಟಾದ ಪ್ರವಾಹದಲ್ಲಿ ಆನೆಯೊಂದು ಸಿಲುಕಿಕೊಂಡಿತ್ತು. ಸತತ 6 ಗಂಟೆಗಳ ಕಾಲ ಆನೆ ಪ್ರವಾಹದಲ್ಲಿ ಸಿಲುಕಿ ಪರದಾಡಿತ್ತು. ಆನೆ ರಕ್ಷಣೆಗೆ ಕಾರ್ಯಾಚರಣೆಗೆ ಒಡಿಶಾ ವಿಪತ್ತು ಕ್ಷಿಪ್ರ ಕಾರ್ಯಾಚರಣೆ ಪಡೆ ಇಳಿದಿತ್ತು. ರಕ್ಷಣಾ ತಂಡದ ಜೊತೆ ಅಲ್ಲಿನ ಪ್ರಾದೇಶಿಕ ಟಿವಿಯೊಂದರ ಪತ್ರಕರ್ತ ಅರಿಂದಮ್ ದಾಸ್ ದೋಣಿಯಲ್ಲಿ ತೆರಳಿದ್ದರು. ಈ ವೇಳೆ ನೀರಿನ ರಭಸಕ್ಕೆ ದೋಣಿ ಮಗುಚಿ ಪತ್ರಕರ್ತ ಸಾವನ್ನಪ್ಪಿದ್ದಾರೆ.ಒಡಿಆರ್ಎಎಫ್ ಸಿಬ್ಬಂದಿ ನಾಪತ್ತೆಯಾಗಿದ್ದೂ ಇನ್ನೂ ಪತ್ತೆಯಾಗಿಲ್ಲ. ಪತ್ರಕರ್ತ ಅರಿಂದಮ್ ಅವರ ಸಹೋದ್ಯೋಗಿ ಪ್ರಭಾತ್ ಸಿನ್ಹಾ, ವಿಡಿಯೋ ಪತ್ರಕರ್ತ ಆಸ್ಪತ್ರೆಗೆ ದಾಖಲಾಗಿದ್ದು ಅವರ ಸ್ಥಿತಿ ಗಂಭೀರವಾಗಿದೆ ಎಂದು ಹೇಳಲಾಗಿದೆ. ದಾಸ್ ಅವರು ಪತ್ನಿ ಮತ್ತು ಎರಡು ವರ್ಷದ ಮಗನನ್ನು ಅಗಲಿದ್ದಾರೆ.
ಈ ದುರ್ಘಟನೆ ನಡೆಯುತ್ತಿದ್ದಂತೆ, ದಾಸ್ ಅವರನ್ನ ಕಟಕ್ ನ ಎಸ್ ಸಿಬಿ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು, ಆಸ್ಪತ್ರೆಗೆ ದಾಖಲಾಗುವ ಮೊದಲೇ ದಾಸ್ ಕೊನೆಯುಸಿರೆಳೆದಿದ್ದರು. ಇನ್ನು ಒಡಿಶಾದ ಎರಡು ವಿಭಾಗಗಳ 80 ಅರಣ್ಯ ಅಧಿಕಾರಿಗಳು ಮತ್ತು ಒಡಿಆರ್ ಎಎಫ್ ಸದಸ್ಯರ ತಂಡವು ಆನೆ ರಕ್ಷಣಾ ಕಾರ್ಯಾಚರಣೆಯಲ್ಲಿ ಭಾಗಿಯಾಗಿತ್ತು. ಈ ರಕ್ಷಣಾ ತಂಡದೊಂದಿಗೆ ಇಬ್ಬರು ಮಾಧ್ಯಮ ಪ್ರತಿನಿಧಿಗಳಿಗೆ ಹೇಗೆ ಅನುಮತಿ ನೀಡಲಾಯಿತು ಎಂಬುದರ ಬಗ್ಗೆ ಒಡಿಶಾ ವಿಪತ್ತು ನಿರ್ವಹಣಾ ಪ್ರಾಧಿಕಾರ ತನಿಖೆಯನ್ನು ಆರಂಭಿಸಿದೆ.
ಇನ್ನು ಅರಣ್ಯಾಧಿಕಾರಿಗಳ ಪ್ರಕಾರ , "ಗುರುವಾರ ತಡರಾತ್ರಿ ಚಂದಕದಿಂದ ಬಂಕಿಗೆ 17 ಆನೆಗಳ ಹಿಂಡು ಸಂಚರಿಸುತ್ತಿತ್ತು.ನೀರಿನ ಪ್ರವಾಹದಿಂದಾಗಿ ಸುಮಾರು 10 ಆನೆಗಳು ಸಿಲುಕಿಕೊಂಡಿದ್ದವು. ಶುಕ್ರವಾರ ಬೆಳಗ್ಗೆ ನದಿಯಲ್ಲಿ ಮೂರು ಆನೆಗಳಿದ್ದವು. ಅದರಲ್ಲಿ ಎರಡು ಆನೆಗಳು ಹೇಗೋ ಹೆಣಗಾಡಿ ನದಿ ದಾಟಿದವು. ಆದರೆ ಈ ಒಂಟಿ ಆನೆ ಸೇತುವೆಯ ಹತ್ತಿರ ಸಿಲುಕಿಕೊಂಡಿತ್ತು. ಆನೆಯು ಆರು ಗಂಟೆಗಳಿಗೂ ಹೆಚ್ಚು ಕಾಲ ಒಂದೇ ಸ್ಥಳದಲ್ಲಿ ಸಿಲುಕಿಕೊಂಡಿದೆ ಮತ್ತು ನದಿ ತೀರವನ್ನು ತಲುಪಲು 20 ಮೀಟರ್ ದೂರವನ್ನು ಕ್ರಮಿಸಬೇಕಾಗಿತ್ತು. ದಡಸೇರಲು ಈ ಸಲಗ ಮಾತ್ರ ಹರಸಾಹಸ ಪಟ್ಟು ಸುಸ್ತಾಗಿತ್ತು. ಮೊದಲು ಆನೆಯ ಸುತ್ತ ಬಲೆಗಳನ್ನು ಹಾಕಿ ಕೊಚ್ಚಿ ಹೋಗದಂತೆ ರಕ್ಷಿಸಲಾಯಿತು. ಬಳಿಕ ದಣಿದಿದ್ದ ಆನೆಗೆ ಆಹಾರವನ್ನ ಎಸೆಯಲಾಯಿತು .ಬಳಿಕ ಸಲಗದ ಸುತ್ತ ಮರದ ಕೊಂಬೆಗಳನ್ನು ಎಸೆದು, ಅದನ್ನು ಬಳಸಿ ತಾನೇ ಆನೆ ದಡ ಸೇರುವಂತೆ ಮಾಡಲಾಗಿದೆ ಎಂದು ಹೇಳಿದ್ದಾರೆ.