ಬೆಳಗಾವಿ, ಸೆ.25 (DaijiworldNews/PY): "ವಾರದೊಳಗೆ ರಾಜ್ಯದಲ್ಲಿ ಮಹತ್ವದ ಬದಲಾವಣೆಯಾಗಲಿದ್ದು, ಸಿಎಂ ಬಸವರಾಜ ಬೊಮ್ಮಾಯಿ ಅವರು ಮಹತ್ವದ ತೀರ್ಮಾನ ಕೈಗೊಳ್ಳಲಿದ್ದಾರೆ" ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದ್ದಾರೆ.
ಗಾಂಧಿ ಭವನದಲ್ಲಿ ನಡೆದ ಲಿಂಗಾಯತ ಪಂಚಮಸಾಲಿ ಪ್ರತಿಜ್ಞಾ ಪಂಚಾಯತ್ನಲ್ಲಿ ಭಾಗವಹಿಸಿ ಮಾತನಾಡಿದ ಅವರು, "ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ ಅವರು ಲಿಂಗಾಯತ ಪಂಚಮಸಾಲಿ ಸಮಾಜಕ್ಕೆ ಪ್ರವರ್ಗ 2ಎ ಮೀಸಲಾತಿ ನೀಡಲು ಮನಸ್ಸು ಮಾಡಲಿಲ್ಲ. ಸಮಾಜದ ಶಾಪ ಅವರಿಗೆ ತಟ್ಟಿದೆ. ಮಾಜಿ ಸಿಎಂ ಆಗಿ, ಅಧಿವೇಶನದಲ್ಲಿ ನಮ್ಮ ಸಾಲಿನಲ್ಲಿ ಕೂರುವಂತಾಯಿತು" ಎಂದು ಹೇಳಿದ್ದಾರೆ.
"ಲಿಂಗಾಯತ ಪಂಚಮಸಾಲಿ ಸಮಾಜಕ್ಕೆ ಪ್ರವರ್ಗ 2ಎ ಮೀಸಲಾತಿಗಾಗಿ ಹೋರಾಟ ಮಾಡುತ್ತಿರುವ ಬಸವ ಜಯಮೃತ್ಯುಂಜಯ ಸ್ವಾಮೀಜಿ ಅವರಿಂದ ಕೂಡಲಸಂಗಮದಲ್ಲಿರುವ ಮಠ ಕಸಿದುಕೊಳ್ಳಲು ಕೆಲವರು ಯತ್ನಿಸುತ್ತಿದ್ದಾರೆ. ಅಲ್ಲದೇ, ಅಲ್ಲಿಗೆ ಬೇರೊಬ್ಬರನ್ನು ತಂದು ಕೂರಿಸುವುದಕ್ಕೂ ಯತ್ನಗಳು ನಡೆದಿವೆ" ಎಂದು ದೂರಿದ್ದಾರೆ.
"ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಾಜಿ ಸಿಎಂ ಬಿಎಸ್ವೈ ಅವರ ನೆರಳಲ್ಲ. ಸಿಎಂ ಬೊಮ್ಮಾಯಿ ಅವರಿಗೆ ಸ್ವತಂತ್ರವಾಗಿ ತೀರ್ಮಾನ ತೆಗೆದುಕೊಳ್ಳುವ, ಅನುಭವ ಹಾಗೂ ಶಕ್ತಿ ಇದೆ. ವಾರದೊಳಗೆ ಅವರು ತೆಗೆದುಕೊಳ್ಳುವ ತೀರ್ಮಾನದಿಂದ ಅವರು ಮಾಜಿ ಸಿಎಂ ಬಿಎಸ್ವೈ ಅವರ ನೆರಳಿನಲ್ಲಿ ಇಲ್ಲ ಎನ್ನುವುದನ್ನು ಸಾಧಿಸಲಿದೆ" ಎಂದಿದ್ದಾರೆ.