ಕೊಯಮತ್ತೂರು, ಸೆ.24 (DaijiworldNews/HR): 50 ವರ್ಷದ ಮಹಿಳೆಯೊಬ್ಬಳು ತನ್ನ ಮಗಳ ಒಂದು ವರ್ಷದ ಮಗುವಿನ ತಲೆಯನ್ನು ಗೋಡೆಗೆ ಬಡಿದು ಬಿಸ್ಕಟ್ ಹೊದಿಕೆಯಿಂದ ಬಾಯಿಯನ್ನು ತುಂಬಿಸಿ ಕೊಲೆ ಮಾಡಿರುವ ಘಟನೆ ತಮಿಳುನಾಡಿನ ಕೊಯಮತ್ತೂರಿನಲ್ಲಿ ನಡೆದಿದೆ.
ಆರೋಪಿಯನ್ನು ಆರ್ ನಾಗಲಾಕ್ಷಿ ಎಂದು ಗುರುತಿಸಲಾಗಿದ್ದು, ಆಕೆಯನ್ನು ಪೊಲೀಸರು ಬಂಧಿಸಿದ್ದಾರೆ.
ನಾಗಲಕ್ಷಿ ಕೊಯಮತ್ತೂರಿನ ಹೋಟೆಲ್ ಒಂದರಲ್ಲಿ ಮನೆಗೆಲಸದವಳಾಗಿ ಕೆಲಸ ಮಾಡುತ್ತಿದ್ದಳು. ಸುಮಾರು ಐದು ವರ್ಷಗಳ ಹಿಂದೆ, ಆಕೆಯ ಮಗಳು ನಂದಿನಿ (24) ವೃತ್ತಿಯಲ್ಲಿ ಕಾಲ್ ಟ್ಯಾಕ್ಸಿ ಮಾಲೀಕ-ಕಮ್-ಡ್ರೈವರ್ ಆಗಿರುವ ನಿತ್ಯಾನಂದಂ ಜೊತೆ ವಿವಾಹ ಆಗಿದ್ದು, ನಾಗಾಲಾಕ್ಷಿ ನಿತ್ಯಾನಂದಂ ವಿರುದ್ಧ ದ್ವೇಷ ಹೊಂದಿದ್ದಳು, ಏಕೆಂದರೆ ಆಕೆಯ ಮಗಳು ಆಕೆಯ ಇಚ್ಛೆಗೆ ವಿರುದ್ಧವಾಗಿ ಆತನೊಂದಿಗೆ ವಿವಾಹವನ್ನು ಮಾಡಿಕೊಂಡಿದ್ದಳು. ಏತನ್ಮಧ್ಯೆ, ನಂದಿನಿ ಮತ್ತು ನಿತ್ಯಾನಂದಂಗೆ ಇಬ್ಬರು ಮಕ್ಕಳಿದ್ದು, ಸುಮಾರು ಎಂಟು ತಿಂಗಳ ಹಿಂದೆ, ಭಿನ್ನಾಭಿಪ್ರಾಯದ ಕಾರಣ ನಂದಿನಿ ತನ್ನ ಗಂಡನನ್ನು ಬಿಟ್ಟು ತನ್ನ ತಾಯಿಯ ಮನೆಗೆ ತೆರಳಿದ್ದಳು ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಹಿರಿಯ ಮಗನನ್ನು ತನ್ನ ಗಂಡನ ಬಳಿ ಬಿಟ್ಟು ತನ್ನ ಕಿರಿಯ ಮಗನನ್ನು ತನ್ನೊಂದಿಗೆ ಕರೆತಂದಿದ್ದಾಳೆ. ಕಳೆದ ಕೆಲವು ದಿನಗಳಿಂದ, ನಾಗಲಾಕ್ಷಿಗೆ ಹುಷಾರಿರಲಿಲ್ಲ ಆದ್ದರಿಂದ, ನಂದಿನಿ ತನ್ನ ತಾಯಿಯ ಬದಲಿಯಾಗಿ ಹೋಟೆಲ್ನಲ್ಲಿ ಕೆಲಸ ಮಾಡಲು ಪ್ರಾರಂಭಿಸಿದಳು. ಮಗು ಮಲಗಿದ್ದನೆಂದು ನಾಗಲಾಕ್ಷಿ ಹೇಳಿದ್ದು, ಮಗುವನ್ನು ಅವಳು ತೊಟ್ಟಿಲಿಗೆ ಹಾಕಿದಳು. ತನ್ನ ಮಗು ಉಸಿರಾಡುತ್ತಿರುವುದಕ್ಕೆ ಕಷ್ಟಪಡುತ್ತಿರುವುದನ್ನು ನಂದಿನಿ ಗಮನಿಸಿದಾಗ ಆಸ್ಪತ್ರೆಗೆ ಕರೆದೊಯ್ದರು, ಅಲ್ಲಿ ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿರುವುದಾಗಿ ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಇನ್ನು ನಂದಿನಿ ತನ್ನ ಮಗುವಿನ ಸಾವಿಗೆ ಸಂಬಂಧಿಸಿದಂತೆ ಪೋಲಿಸ್ ದೂರು ದಾಖಲಿಸಿದ್ದು, ದೂರಿನ ಆಧಾರದ ಮೇಲೆ ಪೊಲೀಸರು ಸಿಆರ್ಪಿಸಿ ಸೆಕ್ಷನ್ 174 ರ ಅಡಿಯಲ್ಲಿ ಪ್ರಕರಣ ದಾಖಲಿಸಿ ಮಗುವಿನ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಮೃತ ಮಗುವಿನ ತಲೆಬುರುಡೆ ಬಿರುಕು ಬಿಟ್ಟಿದ್ದು, ಆತನ ಗಂಟಲಿನಲ್ಲಿ ಬಿಸ್ಕತ್ ಹೊದಿಕೆ ಪತ್ತೆಯಾಗಿದೆ.
ಸಿಆರ್ಪಿಸಿ ಪ್ರಕರಣವನ್ನು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 302 ರ ಅಡಿಯಲ್ಲಿ ಕೊಲೆ ಪ್ರಕರಣ ದಾಖಲಾಗಿ ವಿಚಾರಣೆ ಆರಂಭಿಸಲಾಗಿದ್ದು, ವಿಚಾರಣೆಯ ಸಮಯದಲ್ಲಿ, ನಾಗಲಾಕ್ಷಿ ಮಗುವನ್ನು ಕೊಂದಿರುವುದು ಬಹಿರಂಗವಾಗಿದ್ದು, ಆಕೆ ಅಪರಾಧವನ್ನು ಒಪ್ಪಿಕೊಂಡ ಬಳಿಕ ಪೊಲೀಸರು ಆಕೆಯನ್ನು ಬಂಧಿಸಿದ್ದಾರೆ.