ಬೆಂಗಳೂರು, ಸೆ.24 (DaijiworldNews/PY): "ಹೊಸ ಶಿಕ್ಷಣ ನೀತಿ, ಕೆಟ್ಟುಹೋಗಿರುವ ಆರ್ಥಿಕತೆ ಸೇರಿದಂತೆ ರಾಜ್ಯ ಸರ್ಕಾರದ ವೈಫಲ್ಯವನ್ನು ಬಯಲು ಮಾಡುವ ಹಲವು ವಿಚಾರಗಳ ಬಗ್ಗೆ ಚರ್ಚೆ ನಡೆಸಲು ಕಾಲಾವಕಾಶ ಕೇಳಿದ್ದೆ. ತಮ್ಮ ಬಂಡವಾಳ ಬಯಲಾಗುತ್ತದೆ ಎಂದು ಹೆದರಿ ರಾಜ್ಯ ಬಿಜೆಪಿ ಸರ್ಕಾರ ಅಧಿವೇಶನವನ್ನು ಆತುರಾತುರದಲ್ಲಿ ಮುಗಿಸಿದೆ" ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, "ರಾಜ್ಯ ಬಿಜೆಪಿ ಸರ್ಕಾರ ಸದನದ ಒಳಗೆ ನಮ್ಮ ಬಾಯಿ ಮುಚ್ಚಿಸಿರಬಹುದು, ನಾವು ಹೋರಾಟವನ್ನು ಬೀದಿಗೆ ಕೊಂಡೊಯ್ಯುತ್ತೇವೆ. ಅಕ್ಟೋಬರ್ 2ರ ಗಾಂಧಿ ಜಯಂತಿಯಂದು ಬೆಲೆಯೇರಿಕೆಯನ್ನು ಖಂಡಿಸಿ ರಾಜ್ಯಾದ್ಯಂತ ಪ್ರತಿಭಟನೆಯನ್ನು ಆರಂಭಿಸಿ, ಬೆಲೆ ಇಳಿಕೆಯಾಗುವವರೆಗೂ ಮುಂದುವರೆಸಿಕೊಂಡು ಹೋಗುತ್ತೇವೆ" ಎಂದಿದ್ದಾರೆ.
"ಕಳೆದ ಹತ್ತು ದಿನಗಳಲ್ಲಿ ನಾವು ಪ್ರಸ್ತಾಪಿಸಿದ್ದ ಯಾವ ವಿಷಯದ ಬಗ್ಗೆಯೂ ಸಮರ್ಪಕ ಉತ್ತರವನ್ನು ಸಿಎಂ ಬಸವರಾಜ ಬೊಮ್ಮಾಯಿ ಅವರಾಗಲಿ, ಸಚಿವರಾಗಲಿ ನೀಡಿಲ್ಲ. ಚರ್ಚೆಗೆ ಅವಕಾಶವೂ ಇಲ್ಲ, ಚರ್ಚಿತ ವಿಷಯಗಳ ಬಗ್ಗೆ ಉತ್ತರವೂ ಇಲ್ಲ. ಇದು ಪ್ರಜಾಪ್ರಭುತ್ವದ ಪ್ರಹಸನವಲ್ಲದೇ ಮತ್ತೇನು?" ಎಂದು ಪ್ರಶ್ನಿಸಿದ್ದಾರೆ.
"ಹೊಸ ಶಿಕ್ಷಣ ನೀತಿಯನ್ನು ಲೋಕಸಭೆಯಲ್ಲಿಯೂ ಚರ್ಚಿಸಿಲ್ಲ, ಇಲ್ಲಿಯೂ ಚರ್ಚಿಸಲು ಅವಕಾಶ ಇಲ್ಲ. ಚರ್ಚಿಸಿದರೆ ಬಣ್ಣ ಬಯಲಾಗಿ ಈ ನೀತಿಯ ಹಿಂದಿನ ಗುಪ್ತ ಅಜೆಂಡಾ ಬಯಲಾಗುತ್ತದೆ ಎನ್ನುವ ಕಾರಣಕ್ಕಾಗಿಯೇ ರಹಸ್ಯವಾಗಿ ಜಾರಿಗೆ ತರಲಾಗುತ್ತಿದೆ" ಎಂದಿದ್ದಾರೆ.
"ಅಂದಾಜು 400 ಕೋಟಿ ರೂ. ಬೆಲೆಯ 116 ಎಕರೆ ಜಮೀನನ್ನು ಕೆಐಎಡಿಬಿ ಜುಜುಬಿ ರೂ.50 ಕೋಟಿ ಗೆ ಆರ್ ಎಸ್ ಎಸ್ ಮೂಲದ ನೂತನ ಶಿಕ್ಷಣ ಸಂಸ್ಥೆಗೆ ನೀಡಿರುವುದು ಈ ಸರ್ಕಾರದ ಬಹುದೊಡ್ಡ ಭೂಹಗರಣ. ಇದನ್ನು ವಿರೋಧ ಮಾಡಿದರೆ ಪಕ್ಷಾತೀತವಾಗಿರಬೇಕಾದ ಸಭಾಧ್ಯಕ್ಷರೇ ಸ್ಥಾನದ ಗೌರವ ಮರೆತು ಸಮರ್ಥನೆಗೆ ಇಳಿಯುತ್ತಾರೆ" ಎಂದು ಹೇಳಿದ್ದಾರೆ.
"ವಿಧಾನ ಸಭಾಧ್ಯಕ್ಷರ ಹುದ್ದೆ ಪಕ್ಷ ರಾಜಕಾರಣವನ್ನು ಮೀರಿದ ಹುದ್ದೆ. ಆ ಸ್ಥಾನದಲ್ಲಿರುವಷ್ಟು ದಿನ ಅವರ ನಿಲುವು-ನಿರ್ಣಯಗಳು ಪಕ್ಷಾತೀತವಾಗಿರಬೇಕು. ಸಭಾಧ್ಯಕ್ಷರು ಒಂದು ರಾಜಕೀಯ ಪಕ್ಷದ ಸದಸ್ಯನಂತೆ ವರ್ತಿಸುವುದಾದರೆ ಆ ಹುದ್ದೆಗೆ ಮಹತ್ವವೇನಿದೆ?" ಎಂದು ಕೇಳಿದ್ದಾರೆ.
"ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪ್ರಜಾಪ್ರಭುತ್ವದಲ್ಲಿ, ಸಂಸದೀಯ ವ್ಯವಸ್ಥೆಯಲ್ಲಿ ನಂಬಿಕೆಯಿಟ್ಟಿದ್ದಾರೆ ಎಂಬ ನನ್ನ ನಂಬಿಕೆ ಹುಸಿಯಾಗಿದೆ. ಆರ್.ಎಸ್.ಎಸ್ ತಾಳಕ್ಕೆ ತಕ್ಕಂತೆ ಮುಖ್ಯಮಂತ್ರಿ, ಸಚಿವರು, ಶಾಸಕರು ಸೇರಿದಂತೆ ಇಡೀ ಸರ್ಕಾರ ಕುಣಿಯುತ್ತಿದೆ" ಎಂದು ಟೀಕಿಸಿದ್ದಾರೆ.
"ಬೆಲೆಏರಿಕೆಯಿಂದ ತತ್ತರಿಸಿರುವ ಜನ ಮನೆಯಲ್ಲಿದ್ದ ಬಂಗಾರ ಅಡವಿಟ್ಟು ಜೀವನ ಸಾಗಿಸುವಂತಾಗಿದೆ. ಸುಮಾರು ರೂ. 4 ಲಕ್ಷದ 17 ಸಾವಿರ ಕೋಟಿ ಬೆಲೆಬಾಳುವ 1500 ಮೆಟ್ರಿಕ್ ಟನ್ ಬಂಗಾರವನ್ನು ಮುತ್ತೂಟ್ ಮತ್ತು ಮಣಪ್ಪುರಂನಲ್ಲಿ ಅಡವಿಟ್ಟಿದ್ದಾರೆ. ಈ ದುಸ್ಥಿತಿಗೆ ದೇಶವನ್ನು ಪ್ರಧಾನಿ ನರೇಂದ್ರ ಮೋದಿ ಸರ್ಕಾರ ತಂದು ನಿಲ್ಲಿಸಿದೆ" ಎಂದು ಆರೋಪಿಸಿದ್ದಾರೆ.
"ಕೇಂದ್ರ ಬಿಜೆಪಿ ಸರ್ಕಾರ ಪೆಟ್ರೋಲ್, ಡೀಸೆಲ್ ಮೇಲಿನ ತೆರಿಗೆ ಕಡಿಮೆ ಮಾಡಿ ಕಾರ್ಪೊರೇಟ್ ಉದ್ದಿಮೆಗಳ ಮೇಲೆ ತೆರಿಗೆ ಹೆಚ್ಚು ಮಾಡಬೇಕಿತ್ತು. ಆದರೆ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಬಂಡವಾಳಶಾಹಿಗಳು, ಉದ್ದಿಮೆದಾರರು, ಕಾರ್ಪೊರೇಟ್ ಕಂಪನಿಗಳಿಗೆ ತೆರಿಗೆ ವಿನಾಯಿತಿ-ರಿಯಾಯಿತಿ ನೀಡಿ, ಬಡವರನ್ನು ಸುಲಿಯುತ್ತಿದೆ" ಎಂದಿದ್ದಾರೆ.
ಕಳೆದ ಏಳು ವರ್ಷಗಳಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಮೇಲಿನ ಅಬಕಾರಿ ಸುಂಕವೊಂದರಲ್ಲೇ ಕೇಂದ್ರ ಸರ್ಕಾರ ರೂ. 23 ಲಕ್ಷ ಕೋಟಿ ತೆರಿಗೆ ಹಣ ಸಂಗ್ರಹಿಸಿದೆ. ಇದು ಜನರ ಬೆವರಗಳಿಕೆಯ ಹಣ. ಇದನ್ನು 'ಕ್ರಿಮಿನಲ್ ಲೂಟ್' ಅಂದರೆ ತಪ್ಪೇನಿದೆ? ಎಂದು ಪ್ರಶ್ನಿಸಿದ್ದಾರೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ರೈತ ಹೋರಾಟವನ್ನು "ಪ್ರಾಯೋಜಿತ ಚಳವಳಿ" ಎಂದು ಕರೆದು ಇಡೀ ರೈತ ಸಮುದಾಯಕ್ಕೆ ಅವಮಾನ ಮಾಡಿದ್ದಾರೆ. ಹೋರಾಟವನ್ನೇ ಮಾಡದೆ ಆಪರೇಷನ್ ಕಮಲದ ಮೂಲಕ ಅಧಿಕಾರ ಹಿಡಿದವರಿಗೆ ಹೋರಾಟದ ಮಹತ್ವ ಹೇಗೆ ಗೊತ್ತಿರುತ್ತದೆ? ಎಂದು ಕೇಳಿದ್ದಾರೆ.
"ತಮಿಳುನಾಡು ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ಪೆಟ್ರೋಲ್, ಡೀಸೆಲ್ ತೆರಿಗೆಯನ್ನು 3 ರೂಪಾಯಿ ಕಡಿತ ಮಾಡಿದ್ದಾರೆ. ಇದೇ ರೀತಿ ಬಿಜೆಪಿ ಸರ್ಕಾರ ಕೂಡಾ ಪೆಟ್ರೋಲ್, ಡೀಸೆಲ್ ಮೇಲಿನ ತೆರಿಗೆಯನ್ನು ರೂ. 10ರಷ್ಟು ಕಡಿತ ಮಾಡಲಿ. ನಮ್ಮ ಪಕ್ಷ ಅಧಿಕಾರದಲ್ಲಿ ಇದ್ದಿದ್ದರೆ ಕನಿಷ್ಟ 10 ರೂಪಾಯಿ ತೆರಿಗೆ ಕಡಿತ ಮಾಡುತ್ತಿದ್ದೆ" ಎಂದಿದ್ದಾರೆ.